ಮಡಿಕೇರಿ, ಸೆ. ೧: ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಕರೆ ನೀಡಿದರು.

ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ ಮೈಸೂರು ಸಾರಸ್ವತ್ ಅಕಾಡೆಮಿ ಸಹಯೋಗದಲ್ಲಿ ಸರ್ಕಾರಿ ವಲಯ ಮತ್ತು ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳು ವಿಷಯದ ಕುರಿತು ಶುಕ್ರವಾರ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಿತು.

ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಮೇಜರ್ ಪ್ರೊ. ರಾಘವ ಬಿ., ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಅಥವಾ ಪಠ್ಯಪುಸ್ತಕದ ಜ್ಞಾನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಜ್ಞಾನವನ್ನು ಕೌಶಲ್ಯವಾಗಿ, ಕೌಶಲ್ಯವನ್ನು ಸಾಮರ್ಥ್ಯವಾಗಿ ಹಾಗೂ ಸಾಮರ್ಥ್ಯವನ್ನು ಸಾಧನೆಯಾಗಿ ಪರಿವರ್ತಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಗುಣಮಟ್ಟ ಭರವಸೆ ಕೋಶ ಸಂಚಾಲಕಿ ಡಾ. ಸೌಮ್ಯ ಕೆ. ಸ್ವಾಗತಿಸಿ, ಕಾರ್ಯಾಗಾರದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತರಬೇತುದಾರ ಹಾಗೂ ನಿವೃತ್ತಪ್ರಾಂಶುಪಾಲ ಪ್ರೊ. ಚಂದ್ರಶೇಖರನ್ ಜಿ. ಭಾಗವಹಿಸಿದ್ದರು. ಸಾರಸ್ವತ್ ಅಕಾಡೆಮಿ ಸ್ಥಾಪಕ ಹಾಗೂ ನಿರ್ದೇಶಕ ಡಾ. ವಸಂತ್ ಕುಮಾರ್ ಎನ್. ಹಾಗೂ ಇತಿಹಾಸ ಮತ್ತು ಸಂವಿಧಾನ ವಿಷಯದ ಸಂಪನ್ಮೂಲ ವ್ಯಕ್ತಿ ನರಸಿಂಹಮೂರ್ತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಸAಪನ್ಮೂಲ ವ್ಯಕ್ತಿ ಡಾ. ವಸಂತ್ ಕುಮಾರ್ ಎನ್. ಅವರು ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಅರ್ಹತೆ, ಪರೀಕ್ಷಾ ಸಿದ್ಧತೆ, ಅಧ್ಯಯನ ವಿಧಾನ ಹಾಗೂ ನಾಗರಿಕ ಸೇವೆಗಳಲ್ಲಿನ ವಿವಿಧ ಹುದ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾರ್ಗದರ್ಶನ ನೀಡಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ವಸಂತ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಹಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜಶಾಸ್ತç ವಿಭಾಗದ ಮುಖ್ಯಸ್ಥೆ ಪ್ರೊ. ಎಸ್.ಎನ್. ಗಾಯತ್ರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಶೈಲಾ ಶ್ರೀ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಅಲೋಕ್, ಉಪನ್ಯಾಸಕರಾದ ನಿವಿಯಾ ಮೇದಪ್ಪ ಹಾಗೂ ಶರತ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.