ಕುಶಾಲನಗರ, ಸೆ. ೧: ಕುಶಾಲನಗರ ಸಮೀಪದ ಮಾದಾಪಟ್ಟಣ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಬೋಟಿಕ್ಸ್ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸರ್ಕಾರಿ ನೌಕರರ ಸೌಹಾರ್ದ ವೇದಿಕೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕುಶಾಲನಗರ ತಾಲೂಕು ಪ್ರಬಾರ ತಹಶೀಲ್ದಾರ್ ಕೃಷ್ಣಮೂರ್ತಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರಿ ನೌಕರರ ಸೌಹಾರ್ದ ವೇದಿಕೆಯ ಜನಪರ ಕಾಳಜಿ ಹಾಗೂ ಸಾಮಾಜಿಕ ಚಟುವಟಿಕೆಗಳ ಚಿಂತನೆ ಸ್ವಾಗತಾರ್ಹವಾಗಿದೆ. ಕೇವಲ ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ಹಳ್ಳಿಗಾಡಿನ ಬಡ ವಿದ್ಯಾರ್ಥಿಗಳು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ವೈಯಕ್ತಿಕವಾಗಿ ಸೇವೆ ಸಲ್ಲಿಸುವುದು ನಿಜವಾದ ಜನಪರ ಕಾಳಜಿಯಾಗಿದೆ ಎಂದರು.

ಈ ನಿಟ್ಟಿನಲ್ಲಿ ಸೌಹಾರ್ದ ವೇದಿಕೆಯ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಮುಂದುವರಿಯಲಿ ಎಂದು ಆಶಿಸಿದರು. ಪ್ರಸಕ್ತ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ತಾಂತ್ರಿಕ ಶಿಕ್ಷಣದ ಜ್ಞಾನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾದಾಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಶಶಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಸುಲಭವಾಗಿ ಲಭ್ಯವಾಗದ ಆಧುನಿಕ ಎಐ, ರೋಬೋಟಿಕ್ಸ್ ಹಾಗೂ ಅಬಾಕಸ್ ಶಿಕ್ಷಣದಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ದಾನಿಗಳು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಸೆಯಾಗಿರುವುದು ಶ್ಲಾಘನೀಯ ಎಂದರು.

ಸೌಹಾರ್ದ ವೇದಿಕೆಯ ಪ್ರಮುಖರು ಹಾಗೂ ದಾನಿಗಳಾದ ಲೋಕೋಪಯೋಗಿ ಇಲಾಖೆಯ ಅಭಿಯಂತರ ಸೈಜನ್ ಪೀಟರ್, ನೀರಾವರಿ ಇಲಾಖೆಯ ಅಭಿಯಂತರ ಡಿ.ಡಿ. ಕಿರಣ್, ಉದ್ಯಮಿಗಳಾದ ನವೀನ್, ಸುಗುರಾಜ್, ರಾಜೇಶ್, ಸೋನಿ ಮ್ಯಾಥ್ಯು ಹಾಗೂ ಗುತ್ತಿಗೆದಾರ ಯೋಗೇಶ್ ಪಟೇಲ್ ಅವರ ತಂಡ ರೋಬೋಟಿಕ್ಸ್ ಕಲಿಕೆಗೆ ವಾರ್ಷಿಕ ಪ್ರಾಯೋಜಕತ್ವ ನೀಡಿದೆ.

ಮಾದಾಪಟ್ಟಣದ ಜತೆಗೆ ಸಮೀಪದ ಬೆಣಗಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ರೋಬೋಟಿಕ್ಸ್ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ರೋಬೋಟಿಕ್ಸ್ಗೆ ಸಂಬAಧಿಸಿದ ವಿಷಯಗಳ ಕುರಿತು ಓಜಸ್ವಿ ಫೌಂಡೇಶನ್‌ನ ಟ್ರಸ್ಟಿಗಳಾದ ಡಾ. ಕವಿತಾ ಹಾಗೂ ಬ್ರಿಜೇಶ್ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಸಹಿತ ಬೋಧನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಸಂದರ್ಭ ಫೌಂಡೇಶನ್‌ನ ತರಬೇತುದಾರರಾದ ಪವಿತ್ರಾ, ಬೆಣಗಾಲಿನ ಮಾಜಿ ಜನಪ್ರತಿನಿಧಿ ಧನರಾಜು ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.