ವೀರಾಜಪೇಟೆ, ಸೆ. ೧: ವೀರಾಜಪೇಟೆಯ ಛತ್ರಕೆರೆ ಬಳಿ ಇರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೧ನೇ ಆರಾಧನಾ ಮಹೋತ್ಸವವು ಭಾನುವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಆರಾಧನಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದಲೇ ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಅಲಂಕಾರಗಳು, ಸೇವಾ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭ ಕೊಟ್ಟೋಳಿಯ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಸ್ವಾಮಿಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ದೇವಾಲಯದ ಅರ್ಚಕ ಸುಬ್ರಮಣ್ಯ ಭಟ್ ಹಾಗೂ ಸಂಗಡಿಗರು ಪೂಜಾ ವಿಧಿವಿಧಾನಗಳನ್ನು ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಾಳೇಟಿರ ಸನ್ನಿ ಕಾವೇರಪ್ಪ, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.