ಸುಂಟಿಕೊಪ್ಪ, ಸೆ. ೧: ಮುಂದಿನ ವಾರದಿಂದಲೇ ಮಾನವ ವನ್ಯಜೀವಿ ಸಂಘರ್ಷದ ಕುರಿತು ಸಭೆ ನಡೆಸುವ ಮೂಲಕ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷದ ಕುರಿತು ಪರಿಹಾರೋಪಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆಯ ವಿವಿಧ ವಲಯಗಳ ನಡುವೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆ ಬಗ್ಗೆ ಹೇಳಿದ ಅವರು ವನ್ಯಪ್ರಾಣಿಗಳ ಸಮಸ್ಯೆಯ ಕುರಿತು ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ. ಪ್ರತಿಯೊಂದು ಪರಿಹಾರಕ್ಕೆ ಅಥವಾ ಅನುದಾನಕ್ಕೆ ಬೆಂಗಳೂರಿನತ್ತ ಮುಖಮಾಡದೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಬಳಿ ಅನುದಾನವನ್ನು ಇಟ್ಟುಕೊಳ್ಳುವಂತೆ ಅವಕಾಶ ಕಲ್ಪಿಸಿ ಎಂದು ತಾವು ಅರಣ್ಯ ಸಚಿವರಿಗೆ ಮನವಿ ಮಾಡಿದಾಗಿ ಅವರು ಮಾಹಿತಿ ನೀಡಿದರು.

ಈ ವ್ಯಾಪ್ತಿಯಲ್ಲಿ ಕೃಷಿಕರು ಭತ್ತದ ಬೇಸಾಯವನ್ನು ಕೈಬಿಟ್ಟಿದ್ದಾರೆ. ಕಾಫಿ ತೋಟಗಳು ಪಾಳುಬೀಳುತ್ತಿವೆ ಈ ಬಗ್ಗೆ ನಾವೆಲ್ಲರೂ ಗಮನಹರಿಸಿ ತುರ್ತು ಮತ್ತು ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಕುಶಾಲನಗರ ಅರಣ್ಯ ವಲಯದಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದೆ ಹೆಚ್ಚು ಕಡಿಮೆ ೩ ದಶಕಗಳ ಹಿಂದಿನಿAದಲೂ ಈ ಸಮಸ್ಯೆ ನಮ್ಮ ನಡುವೆ ಜೀವಂತವಾಗಿದೆ ಎಂದ ಅವರು ಆನೆ ಕಂದಕಗಳಿAದ ಹಿಡಿದು ರೈಲ್ವೆ ಬ್ಯಾರಿಕೇಡ್ ಪರಿಹಾರದವರೆಗಿನ ವಿವರವನ್ನು ನೀಡಿದರು.

ಮಡಿಕೇರಿ ಡಿಸಿಎಫ್ ಅಭಿಷೇಕ್ ಮಾತನಾಡಿ, ಈಗಾಗಲೇ ಸಮಗ್ರ ಕ್ರಿಯಾಯೋಜನೆಯ ಸಂಬAಧ ನೀಲಿನಕಾಶೆ ಶೇ.೭೦ ರಷ್ಟು ಮುಗಿದಿದ್ದು, ಮೊದಲ ಹಂತದಲ್ಲಿ ರೂ.೫ ಕೋಟಿಯ ತುರ್ತು ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿ ಶಾಸಕರ ಮೂಲಕ ಶೀಘ್ರ ಅನುದಾನವನ್ನು ಪಡೆಯಲು ಪ್ರಯತ್ನಿಸಲಾಗುವುದೆಂದು ಮಾಹಿತಿ ನೀಡಿದರು.

ಕೊಡಗು ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಮಾತನಾಡಿ, ಆನೆ ಕಂದಕ ಸೋಲಾರ್ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ವಿಫಲಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಶಾಸಕರು ಸರಕಾರದ ಮೂಲಕ ಅಗತ್ಯ ಅನುದಾನ ತಂದು ಇಲಾಖೆ ಮತ್ತು ಕೃಷಿಕರ ಬೇಡಿಕೆ ಪರಿಹಾರ ಸಂಬAಧ ಕಾರ್ಯಪ್ರವೃತ್ತರಾಗಬೇಕು. ಒಂದು ಅವಧಿಯ ಬೇಡಿಕೆಗಳು ಈಡೇರದಿದ್ದಲ್ಲಿ ಪ್ರತಿಭಟನೆ ಮಾಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು.

ಕಂಬಿಬಾಣೆ ನಿವಾಸಿ ಡಾ. ಶಶಿಕಾಂತ ರೈ ಮಾತನಾಡಿ ಕೊಡಗರಹಳ್ಳಿ ಕಂಬಿಬಾಣೆ, ಅತ್ತೂರು ನಲ್ಲೂರು, ೭ನೇ ಹೊಸಕೋಟೆ, ಅಂದಗೋವೆ ಉಪ್ಪುತೋಡು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಬಗ್ಗೆ ವಿವರಿಸಿದರು. ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಆನೆಕಾಡಿನಲ್ಲಿ ಪುನರ್‌ವಸತಿ ಮಾಡುವ ನಿಟ್ಟಿನಲ್ಲಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.

ಹೆರೂರು ಚಂದ್ರಶೇಖರ್ ಮಾತನಾಡಿ ತಮ್ಮ ತೋಟದಲ್ಲಿ ಕಳೆದ ಬಾರಿ ನೂರು ಅಡಿಕೆ ಗಿಡಗಳನ್ನು ಆನೆ ನಾಶ ಮಾಡಿದ್ದು, ಈ ಬಾರಿ ಮತ್ತೆ ೮೦ ಗಿಡಗಳು ನಾಶವಾಗಿವೆ ಎಂದರು.

ಅತ್ತೂರು ನಲ್ಲೂರು ಗ್ರಾಮದ ಬಿ.ಜಿ.ಜವಹಾÀರ್ ಮಾತನಾಡಿ, ಆನೆಕಾಡು ವ್ಯಾಪ್ತಿಯಲ್ಲಿ ಸುಮಾರು ೩೦೦ ಚೀಲ ಕಾಫಿ ಬೆಳೆಯಲಾಗುತ್ತಿದ್ದು, ಕಳ್ಳರ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಕಂಬಿಬಾಣೆಯ ಪುರುಷೋತ್ತಮ ಮಾತನಾಡಿ, ಆನೆಗಳಿಂದಾಗುವ ಫಸಲು ನಷ್ಟಕ್ಕೆ ಅರ್ಜಿ ಸಲ್ಲಿಸಿದಾಗ ನಿಮ್ಮದು ಕಾಂಡಚಿನ ಜಾಗವೆಂದು ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆದಕಲ್ ನಿವಾಸಿ ಯಂಕನ ಗೋಪಿ ತಿಮ್ಮಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಯಾವ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ ಎಂದು ಪ್ರಶ್ನಿಸಿದರು.

ಚೆಪ್ಪುಡಿರ ಸತೀಶ್ ಮಾತನಾಡಿ, ಅರಣ್ಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ನಮ್ಮಲ್ಲಿನ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸುವ ಪ್ರಯತ್ನ ಮಾಡಿ ಎಂದು ಮನವಿ ಮಾಡಿದರು.

೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸೌಮ್ಯ ಮಾತನಾಡಿ, ಕಾಡಾನೆಗಳು ರಸ್ತೆಯಲ್ಲಿ ಜನವಸತಿ ಪ್ರದೇಶಗಳಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದು ಹಲುವಾರು ದಾಳಿಗಳು ನಡೆಸಿವೆ. ಇಲಾಖೆಯವರಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಆರೋಪಿಸಿದರು.

ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ಉಪಾಧ್ಯಕ್ಷ ಕುಂಜಿಲನ ಎಸ್. ಮಂಜುನಾಥ್, ದಾಸಂಡ ರಮೇಶ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ಎ.ಸಿಎಫ್ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್ ಮತ್ತಿತರರು ಹಾಜರಿದ್ದರು.

ರೈತ ಸಂಘ ಮನವಿ

ಸುಂಟಿಕೊಪ್ಪ ಹೋಬಳಿಯಲ್ಲಿ ಮಿತಿ ಮೀರಿರುವ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಸುಂಟಿಕೊಪ್ಪ ಹೋಬಳಿ ರೈತಸಂಘ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರಿಗೆ ಮನವಿ ಸಲ್ಲಿಸಿದೆ.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷದ ಕುರಿತು ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ನಾಗಚೆಟ್ಟಿರ ಪೊನ್ನಪ್ಪ ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಶ್ವತ ಆನೆ ತಡೆಗೋಡೆ ಮತ್ತು ಸೌರಬೇಲಿ ನಿರ್ಮಿಸಬೇಕು ಸೇರಿದಂತೆ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಶೇಷ ಕಾರ್ಯಯೋಜನೆ ರೂಪಿಸಬೇಕೆಂದು ಕೋರಿದರು.