ಸೋಮವಾರಪೇಟೆ, ಸೆ. ೧: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಒಕ್ಕಲಿಗರ ೧೦ನೇ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ತಾ.೬ರಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ದೇವರಾಜು ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆಯ ಕ್ರೀಡಾಕೂಟ ಉಸ್ತುವಾರಿ ದಿವಾಕರ್ ಕೂತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೬ರಂದು ಕ್ರೀಡಾಕೂಟ ನಡೆಯಲಿದೆ. ಪ್ರತಿವರ್ಷವೂ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುತ್ತಿರುವ ವೇದಿಕೆ, ಈ ಬಾರಿ ದಶಮಾನೋತ್ಸವದ ಸಂಭ್ರಮದಲ್ಲಿ ಕ್ರೀಡಾಕೂಟವನ್ನು ಮತ್ತಷ್ಟು ವಿಶೇಷವಾಗಿ ಆಯೋಜಿಸುತ್ತಿದೆ ಎಂದು ಹೇಳಿದರು.

ಪುರುಷರ ವಿಭಾಗದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಕೆಸರುಗದ್ದೆ ಓಟ, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಕೆಸರುಗದ್ದೆ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ದಂಪತಿ ಓಟ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಓಟದ ಸ್ಪರ್ಧೆಗಳನ್ನೂ ನಡೆಸಲಾಗುತ್ತಿದೆ. ಹೀಗಾಗಿ ಕ್ರೀಡಾಕೂಟ ಗ್ರಾಮೀಣ ಕ್ರೀಡಾ ಹಬ್ಬವಾಗಿ ರೂಪುಗೊಳ್ಳಲಿದೆ. ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕ್ರೀಡಾಕೂಟದಲ್ಲಿ ಶಾಸಕ ಡಾ.ಮಂತರ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಬೆಂಗಳೂರು ಪ್ರತಿನಿಧಿ ಉಮಾಪತಿಗೌಡ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಮತ್ತಿತರರÀÄ ಭಾಗವಹಿಸಲಿದ್ದಾರೆ. ತಾ.೫ ರ ಸಂಜೆ ೪ ಗಂಟೆಯೊಳಗೆ ತಂಡಗಳು ಮತ್ತು ಸ್ಪರ್ಧಿಗಳು ೯೪೪೮೪೩೩೨೯೪, ೮೮೬೧೯೯೧೩೭೨ ಮೊ.ಸಂಖ್ಯೆಯ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಚೌಡ್ಲು ಯೋಗೇಂದ್ರ, ಪದಾಧಿಕಾರಿಗಳಾದ ಪ್ರಸಿ ಗೌಡಳ್ಳಿ, ಕಿಶನ್ ಚಂಗಪ್ಪ, ಕೆ.ಎ.ಪ್ರಕಾಶ್ ಇದ್ದರು.