ಸುಂಟಿಕೊಪ್ಪ ಆ. ೩೧ : ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಹಿರಿಯ ಜೀವಿಗಳಿಗೆ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳು ಹಿರಿಯರನ್ನು ಗೌರವಿಸುವ ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ, ತಾವು ಹಿರಿಯರಾದಾಗ ತಮ್ಮ ಮಕ್ಕಳಿಂದಲೂ ಅದೇ ಗೌರವವನ್ನು ನಿರೀಕ್ಷಿಸಲು ಸಾಧ್ಯ ಎಂದು ರೋಟರಿ ಮಿಸ್ಟಿ ಹಿಲ್ಸ್ನ ಪ್ರಮುಖ ಎ. ಲೋಕೇಶ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಹಿರಿಯ ವರ್ತಕ ಹಾಗೂ ಕ್ರೀಡಾಪಟು ಕೆ.ಪಿ. ಜಗನ್ನಾಥ್, ಸಮಾಜ ಸೇವಕ ಬಿ.ಎಸ್. ಈರಪ್ಪ ಹಾಗೂ ಬಿ.ಎಸ್.ಎಸ್.ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿ ರಶೀದ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಶೀದ್ ಖಾನ್, ತಂದೆ-ತಾಯಿಗಳು ಸದಾ ಮಕ್ಕಳ ಸುರಕ್ಷತೆ ಹಾಗೂ ಏಳಿಗೆಯನ್ನೇ ಬಯಸುತ್ತಾರೆ. ಇಂತಹ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಪ್ರವೃತ್ತಿ ಕಂಡುಬರುತ್ತಿರುವುದು ವಿಷಾದನೀಯ ಎಂದರು. ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿ ಗಳಾದ ಎ.ಎಸ್. ಹಾರ್ದಿಕ್, ರಿಫಾ ಹಾಗೂ ನಪ್ಯ ಖಾನಂ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವ ಹಾಗೂ ಕಿರಿಯರು ಹಿರಿಯರನ್ನು ಗೌರವಿಸಿ, ಪ್ರೀತಿಯಿಂದ ನೋಡಿಕೊಳ್ಳುವ ಅಗತ್ಯದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಗೌರವಾಧ್ಯಕ್ಷ ರಫೀಕ್ ಖಾನ್, ಎಸ್‌ಡಿಎಂಸಿ ಅಧ್ಯಕ್ಷೆ ಸಂಧ್ಯಾ ಹಾಗೂ ಮುಖ್ಯಶಿಕ್ಷಕ ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಓ.ಪಿ. ದಿನೇಶ್, ಲಿಂಗರಾಜು, ಜಯಂತ್ ಹಾಗೂ ಹಿರಿಯ ನಾಗರಿಕ ಹೆಚ್. ಉಸ್ಮಾನ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಕೆ.ಎಂ. ಆಲಿಕುಟ್ಟಿ, ಶಬೀರ್ ಹಾಗೂ ಪೋಷಕರು ಪಾಲ್ಗೊಂಡಿದ್ದರು.