ವೀರಾಜಪೇಟೆ, ಆ. ೩೧: ನಗರದ ಗೌರಿಕೆರೆ ರಸ್ತೆಯಲ್ಲಿರುವ ಶಾಖಾ ಕಚೇರಿಯಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವೀರಾಜಪೇಟೆ ಶಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಶಾಖೆ ಅಧ್ಯಕ್ಷ ಟಿ.ಆರ್. ನಾರಾಯಣ ಮಾತನಾಡಿ, ಸಮಾಜ ಪರಿವರ್ತನೆಗೆ ಶ್ರಮಿಸಿದ ಅಧ್ಯಾತ್ಮಿಕ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ‘ಒಂದೇ ಜಾತಿ, ಒಂದೇ ಮತ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎಂದು ಹೇಳಿದರು.
ನಾರಾಯಣ ಗುರುಗಳು ಸಮಾಜಕ್ಕೆ ಸರಳ ಜೀವನಶೈಲಿಯನ್ನು ಪರಿಚಯಿಸುವುದರೊಂದಿಗೆ ಸಾಮಾಜಿಕ ಪರಿವರ್ತನೆಗೆ ಕಾರಣರಾದರು ಎಂದರು.
ವೀರಾಜಪೇಟೆ ಎಸ್‌ಎನ್‌ಡಿಪಿ ಶಾಖೆಯ ಕಾರ್ಯದರ್ಶಿ ಪದ್ಮನಾಭ ಅವರು ನಾರಾಯಣ ಗುರುಗಳ ಸಂದೇಶವನ್ನು ವಾಚಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸದಸ್ಯೆ ಸುಶೀಲಾ ನಾಮಸಂಕೀರ್ತನೆ ಹಾಡಿದರು. ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್, ಎಸ್‌ಎನ್‌ಡಿಪಿ ಯೂನಿಯನ್ ಸದಸ್ಯರಾದ ಭಾಸ್ಕರ, ಎಲ್.ಜಿ. ಉಪೇಂದ್ರ ಸೇರಿದಂತೆ ವೀರಾಜಪೇಟೆ ಶಾಖೆಯ ಸದಸ್ಯರು ಉಪಸ್ಥಿತರಿದ್ದರು.