ವೀರಾಜಪೇಟೆ: ವೀರಾಜಪೇಟೆಯ ಐತಿಹಾಸಿಕ ಗಣೇಶೋತ್ಸವದ ಈ ಬಾರಿಯ ಕಣ್ಣುಮನ ಸೆಳೆಯುವ ಶೋಭಾಯಾತ್ರೆಯಲ್ಲಿ ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿಯ ಗಣೇಶೋತ್ಸವವು ಪ್ರಮುಖ ಆಕರ್ಷಣೆ ಯಾಗಿ ಧಾರ್ಮಿಕ ವೈಭವವನ್ನು ಪಸರಿಸಲು ಸಂಪೂರ್ಣವಾಗಿ ಸಜ್ಜಾಗಿದೆ.
ಕಳೆದ ೩೪ ವರ್ಷಗಳಿಂದ ನಿರಂತರವಾಗಿ ಶ್ರದ್ಧಾ-ಭಕ್ತಿಗಳಿಂದ ನಡೆದು ಬಂದಿರುವ ಈ ಉತ್ಸವವು, ಈ ಬಾರಿಯೂ ಐತಿಹಾಸಿಕ ಶೋಭಾಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಕಳೆಗಟ್ಟಲಿದೆ.
ಶ್ರದ್ಧಾಭಕ್ತಿಯಿಂದ ವಿಸ್ತರಿಸಿದ ಉತ್ಸವದ ಇತಿಹಾಸದ ಆರಂಭದ ದಿನಗಳಲ್ಲಿ ಹಿರಿಯರಾದ ಮಾಳೆಟಿರ ಕಾಶಿ, ಚಾಮಿ, ರಾಮಣ್ಣ, ಕುಯ್ಮಂಡ ಕಿರಣ್, ಪಟ್ಟಡ ಬೋಪಣ್ಣ ಹಾಗೂ ಸದಸ್ಯರು ಗಣೇಶ ಮೂರ್ತಿಗೆ ಹೂವಿನ ಹಾರ ಹಾಕಿ ೫ ದಿನಗಳ ಕಾಲ ಸರಳವಾಗಿ ಈ ಉತ್ಸವಕ್ಕೆ ಚಾಲನೆ ನೀಡಿದ್ದರು. ಹೀಗೆ ೭ ವರ್ಷಗಳ ಕಾಲ ಯಶಸ್ವಿಯಾಗಿ ನಡೆದ ಈ ಪವಿತ್ರ ಪರಂಪರೆಯನ್ನು ನಂತರ ಬಂದ ಯುವ ಉತ್ಸಾಹಿ ಪಡೆ ಮುನ್ನಡೆಸಿತು.
ಕಳೆದ ೨೭ ವರ್ಷಗಳಿಂದ ಕುಯ್ಮಂಡ ರಾಕೇಶ್ ಬಿದ್ದಪ್ಪ, ನಿತಿನ್, ತಿಮ್ಮಯ್ಯ, ಚೆಲುವರಾಜು, ವಸಂತ, ಸುನಿಲ್ ಮಿನೇಜಸ್, ನಿಶಾಂತ್, ಅಲ್ಲಪಂಡ ಚೇತನ್, ಕಿರಣ್ ಹಾಗೂ ಶಶಿ ಚಂಗಪ್ಪ ಅವರನ್ನೊಳಗೊಂಡ ತಂಡವು ಗಣೇಶೋತ್ಸವವನ್ನು ೧೧ ದಿನಗಳ ಕಾಲ ವಿಸ್ತರಿಸಿ, ಅತ್ಯಂತ ವೈಭವದಿಂದ ನಡೆಸಿಕೊಂಡು ಬಂದಿತ್ತು.
ಪ್ರಸ್ತುತ ಸಮಿತಿಯಲ್ಲಿ ಕುಯ್ಮಂಡ ರಾಕೇಶ್ ಬಿದ್ದಪ್ಪ, ನಿತಿನ್, ರಂಜನ್, ಪ್ರೀತೇಶ್, ಚಿಲ್ಲವಂಡ ಗಣಪತಿ, ಐಚಂಡ ಸದಾ, ನಂಬುಡುಮಾಡ ದೀಕ್ಷಿತ್, ಕೊಪ್ಪಿರ ಮಂಜು, ತಿಮ್ಮಯ್ಯ, ವಸಂತ್, ನವೀನ್ ಸೇರಿದಂತೆ ಹಲವು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
೧೧ ದಿನಗಳ ಸಾಂಸ್ಕöÈತಿಕ ಕಲಾ ವೈಭವದೊಂದಿಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯ ಶುಭ ಮುಹೂರ್ತದಿಂದ ಹಿಡಿದು ಐತಿಹಾಸಿಕ ಶೋಭಾಯಾತ್ರೆಯ ಮೂಲಕ ಮೂರ್ತಿಯ ವಿಸರ್ಜನೆ ನಡೆಯುವವರೆಗೂ ಪ್ರತಿದಿನ ಅನ್ನಸಂತರ್ಪಣೆ ಮಾಡುತ್ತಾರೆ. ಇದರೊಂದಿಗೆ ಪ್ರತಿಸಂಜೆ ಆರ್ಕೆಸ್ಟಾç, ಭರತನಾಟ್ಯ ಹಾಗೂ ಕಣ್ಣುಕಟ್ಟುವ ಮ್ಯಾಜಿಕ್ ಶೋಗಳು ಪ್ರೇಕ್ಷಕರನ್ನು ರಂಜಿಸಲಿವೆ. ಸ್ಥಳೀಯ ಪ್ರತಿಭಾವಂತ ಮಕ್ಕಳಿಗೆ ತಮ್ಮ ಕಲಾಪ್ರದರ್ಶನ ನೀಡಲು ವಿಶೇಷ ವೇದಿಕೆ ಕಲ್ಪಿಸಲಾಗುತ್ತಿದೆ. ಇದೇ ವೇಳೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಾರೆ.
ಅತಿ ಕಡಿಮೆ ಸದಸ್ಯ ಬಲವನ್ನು ಹೊಂದಿರುವ ಈ ಸಮಿತಿಯಲ್ಲಿ ೧೧ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಗಾಂಧಿನಗರ ಶ್ರೀ ಗಣಪತಿ ಸೇವಾ ಸಮಿತಿ ಐತಿಹಾಸಿಕ ಗಣೇಶೋತ್ಸವಕ್ಕೆ ಮೆರುಗು ನೀಡಲಿದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧