ಪೊನ್ನಂಪೇಟೆ, ಆ. ೩೧: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ವರ್ಷದ ವಾರ್ಷಿಕ ಮಹಾಸಭೆಯು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ.೮೩.೧೮ ಕೋಟಿ ವ್ಯವಹಾರ ನಡೆಸಿ ರೂ.೧೫.೩೨ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೋಳೆರ ಸಿ. ದಿನು ತಿಳಿಸಿದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಲೆಕ್ಕಪರಿಶೋಧನಾ ವರದಿಯಲ್ಲಿ ‘ಬಿ’ ವರ್ಗೀಕರಣ ಪಡೆದಿದೆ. ೧೯೭೬ರಲ್ಲಿ ಸ್ಥಾಪನೆಯಾದ ಸಂಘವು ಪ್ರಸಕ್ತ ವರ್ಷ ೫೦ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಸಂಘದಲ್ಲಿ ೧,೩೭೬ ಸದಸ್ಯರಿದ್ದು, ರೂ.೧.೪೦ ಕೋಟಿ ಷೇರು ಬಂಡವಾಳ ಹೊಂದಿದೆ. ಒಟ್ಟು ರೂ.೯.೮೩ ಕೋಟಿ ಠೇವಣಿ ಸಂಗ್ರಹವಾಗಿದ್ದು, ಸದಸ್ಯರಿಗೆ ರೂ.೧೫.೦೪ ಕೋಟಿ ಸಾಲ ಹಾಗೂ ರೂ.೭.೭೧ ಕೋಟಿ ಕೆಸಿಸಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ಪೊನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಮಾತನಾಡಿ, ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಚೀರಂಡ ಕಂದಾ ಸುಬ್ಬಯ್ಯ ಅವರ ಅಕಾಲಿಕ ನಿಧನವು ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಸಂಘದ ಏಳಿಗೆಗಾಗಿ ಅವರು ಅಪಾರ ಶ್ರಮವಹಿಸಿ ಸಂಸ್ಥೆಯನ್ನು ಉತ್ತಮ ಹಂತಕ್ಕೆ ತಂದು ನಿಲ್ಲಿಸಿದ್ದರು. ಅವರು ಹಾಕಿಕೊಟ್ಟ ಭದ್ರ ಅಡಿಪಾಯವನ್ನು ಪಾಲಿಸಿಕೊಂಡು ಸಂಘವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವಂತೆ ಪ್ರಸ್ತುತ ಆಡಳಿತ ಮಂಡಳಿಗೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ, ಸದಸ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಘವು ಹಿಂದಿನ ಸವಾಲುಗಳನ್ನು ಮೆಟ್ಟಿ ನಿಂತು ಇಂದು ಲಾಭದಾಯಕ ಸಂಸ್ಥೆಯಾಗಿ ಬೆಳೆದಿದೆ. ಸಂಘದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಹಾಕಿಕೊಟ್ಟ ಭದ್ರಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಿ, ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಭೆಯಲ್ಲಿ ಹಿರಿಯ ಸಹಕಾರಿಗಳು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಹಕಾರಿಗಳಾದ ಮೂಕಳೇರ ನಂದಾ, ಕೋಳೆರ ದಯಾ ಚಂಗಪ್ಪ, ಮುದ್ದಿಯಡ ಪ್ರಕಾಶ್, ಅಡ್ಡಂಡ ಡಾಲಿ ಜನಾರ್ದನ, ಆಲೇಮಾಡ ನವೀನ್, ಮೂಕಳೇರ ರಮೇಶ್, ಸಂಘದ ನಿರ್ದೇಶಕರಾದ ಅಡ್ಡಂಡ ತಿಮ್ಮಯ್ಯ, ಮಚ್ಚಿಯಂಡ ಸುವೀನ್, ಮೂಕಳೇರ ಸರಸ್ವತಿ, ಕಾಕೆರ ತಾರ, ಅಬ್ದುಲ್ ಅಜೀಜ್, ಹೆಚ್.ಸಿ. ವಿಠಲ, ಪಡಿಞರಂಡ ಗಿರೀಶ್, ಚೀರಂಡ ಶರಣ್ ಅಯ್ಯಪ್ಪ, ಬಿ.ಬಿ. ಸುಮಿತ್ರಾ , ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸದಸ್ಯರಿದ್ದರು. ನಿರ್ದೇಶಕ ಮಂಜುವAಡ ಅರುಣ್ ಬೆಳ್ಳಿಯಪ್ಪಮಯ್ಯ ಸ್ವಾಗತಿಸಿ, ಚೀರಂಡ ಚಂಗಪ್ಪ ವಂದಿಸಿದರು.