ಚೆಟ್ಟಳ್ಳಿ, ಆ. ೩೦: ಪೊಲೀಸ್ ಅಕ್ಕಪಡೆ ವತಿಯಿಂದ ಸಿದ್ದಾಪುರದ ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಕುರುಬರ ಹಾಡಿ, ಗಂಧದಕಟ್ಟೆ ಕುರುಬರ ಹಾಡಿ ಹಾಗೂ ಚೊಟ್ಟೆಕೆರೆ ಸೋಲಿಗರ ಹಾಡಿಗಳಿಗೆ ಭೇಟಿ ನೀಡಿ ನಿವಾಸಿಗಳಿಗೆ ವಿವಿಧ ಕಾನೂನು ಹಾಗೂ ಸಾಮಾಜಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯವಿವಾಹ ನಿರ್ಮೂಲನೆ ಕುರಿತು ಮಾಹಿತಿ ನೀಡಲಾಯಿತು. ಮದುವೆ ಸಂದರ್ಭ ವಧು-ವರರ ವಯಸ್ಸನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳುವಂತೆ ತಿಳಿಸಲಾಯಿತು.

ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳು, ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರುವ ವಿಧಾನಗಳು, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ತಡೆ ಹಾಗೂ ಕೌಟುಂಬಿಕ ಕಲಹಗಳ ಕುರಿತು ಅರಿವು ಮೂಡಿಸಲಾಯಿತು.

ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸುವುದು, ಅವರನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿ ನಿಯಮಿತವಾಗಿ ಶಾಲೆಗೆ ಕಳುಹಿಸುವುದು, ಕಾರ್ಮಿಕರಿಗೆ ಕನಿಷ್ಟ ವೇತನ ಹಾಗೂ ಕಾರ್ಮಿಕರ ಸುರಕ್ಷತೆಯ ಮಹತ್ವದ ಬಗ್ಗೆಯೂ ಮಾಹಿತಿ ನೀಡಲಾಯಿತು

ತುರ್ತು ಸಂದರ್ಭದಲ್ಲಿ ನೆರವು ಪಡೆಯಲು ೧೧೨ ಪೊಲೀಸ್ ತುರ್ತು ಸಹಾಯವಾಣಿ, ೧೮೧ ಮಹಿಳಾ ಸಹಾಯವಾಣಿ, ೧೦೯೮ ಮಕ್ಕಳ ಸಹಾಯವಾಣಿ ಹಾಗೂ ೧೯೩೦ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗಳ ಕುರಿತು ನಿವಾಸಿಗಳಿಗೆ ತಿಳಿಸಲಾಯಿತು.

ಅಕ್ಕಪಡೆಯ ಸದಸ್ಯರು ಹಾಡಿ ನಿವಾಸಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಕಾನೂನು ಹಕ್ಕುಗಳ ಬಗ್ಗೆ ಅರಿವು ಹೊಂದುವುದರ ಜೊತೆಗೆ ಸರ್ಕಾರದ ವಿವಿಧ ನೆರವು ಹಾಗೂ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಟ್ವೀಟ್ ಮಾಡಿದ್ದಕ್ಕೆ ಬಂಧನ : ಪೊಲೀಸರ ಕ್ರಮವನ್ನು ಕಟುವಾಗಿ ಟೀಕಿಸಿದ ರಾಜ್ಯ ಹೈಕೋರ್ಟ್ - ಸುತ್ತೋಲೆ ಹೊರಡಿಸಲು ಡಿಜಿಪಿಗೆ ಸೂಚನೆ