ವೀರಾಜಪೇಟೆ, ಆ. ೩೦: ಪಶ್ಚಿಮ ಘಟ್ಟ ಪರಿಸರ ಸೂಕ್ಷö್ಮ ಪ್ರದೇಶಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ೭ನೇ ಕರಡು ಅಧಿಸೂಚನೆಯನ್ನು ಖಂಡಿಸಿ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಆಗ್ರಹಿಸಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ, ನಿರ್ಮಲಗಿರಿ ಹಾಗೂ ತೋರ ಗ್ರಾಮಸ್ಥರು ತುರ್ತು ಸಭೆ ನಡೆಸಿದರು.

ಬೂದಿಮಾಳ ಸಮುದಾಯ ಭವನದ ಆವರಣದಲ್ಲಿ ನಡೆದ ಸಭೆಯ ಬಳಿಕ ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕಸ್ತೂರಿ ರಂಗನ್ ವರದಿಯಡಿ ಶೇ.೩೭ರಷ್ಟು ಪ್ರದೇಶವನ್ನು ಪರಿಸರ ಸೂಕ್ಷö್ಮ ವಲಯವೆಂದು ಗುರುತಿಸುವ ಪ್ರಕ್ರಿಯೆಯಲ್ಲಿ ಕಾಫಿ, ಏಲಕ್ಕಿ ತೋಟಗಳು ಹಾಗೂ ಸಾಂಪ್ರದಾಯಿಕ ಕೃಷಿ ಭೂಮಿಗಳು ಸೇರ್ಪಡೆಯಾಗುತ್ತಿರುವುದು ಸ್ಥಳೀಯ ಕೃಷಿಕರು ಹಾಗೂ ಬಡಜನರ ಜೀವನೋಪಾಯಕ್ಕೆ ನೇರ ಹೊಡೆತ ನೀಡಲಿದೆ ಎಂದರು.

ಕೇAದ್ರ ಸರ್ಕಾರ ೭ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಕಾಲಾವಕಾಶ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯದಿಂದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಹಿರಿಯರಾದ ಪೊರೇರ ಬಿದ್ದಪ್ಪ ಮಾತನಾಡಿ, ಕರ್ನಾಟಕದ ೧,೧೫೦ಕ್ಕೂ ಹೆಚ್ಚು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಿಂದ ಹೊರಗಿಡಬೇಕು. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸೇರಿದಂತೆ ರಾಜ್ಯದ ೨೮ ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ಸಂಸತ್ತಿನಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಿ, ಪ್ರಧಾನಮಂತ್ರಿಗಳ ಗಮನಕ್ಕೆ ತಂದು ವರದಿಯನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ವೆ ನಂಬರ್ ೨೧೩, ೨೧೯, ೩೧೭ ಸೇರಿದಂತೆ ನೂರಾರು ಎಕರೆ ಪೈಸಾರಿ ಜಾಗವನ್ನು ಸಿ ಮತ್ತು ಡಿ ವ್ಯಾಪ್ತಿಗೆ ಸೇರಿಸಿರುವುದನ್ನು ತಕ್ಷಣವೇ ರದ್ದುಪಡಿಸಬೇಕು. ದಟ್ಟ ಅರಣ್ಯವನ್ನು ಅರಣ್ಯ ಇಲಾಖೆಯೇ ಸಂರಕ್ಷಿಸಲಿ. ಆದರೆ ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಬಡವರು ಹಾಗೂ ಸಣ್ಣ ಕೃಷಿಕರಿಗೆ ತಕ್ಷಣ ಸಾಗುವಳಿ ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಈ ಭಾಗದ ೨,೦೦೦ಕ್ಕೂ ಹೆಚ್ಚು ಮತದಾರರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಹಕ್ಕುಪತ್ರಕ್ಕಾಗಿ ಬೃಹತ್ ಸಮಾವೇಶ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಮನವಿ ಸ್ವೀಕರಿಸಿ ಮೇಲಧಿಕಾರಿಗಳಿಗೆ ತಲುಪಿಸುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಯಶೋಧ ಗ್ರಾಮಸ್ಥರಾದ ಪೂಜಾ ಸಜೇಶ್, ದಿನೇಶ್, ಅಯ್ಯಪ್ಪ, ಎ. ಹರೀಶ್ ಸೇರಿದಂತೆ ಮೂರು ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.