ಮಡಿಕೇರಿ, ಆ. ೩೦: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ೨೦೨೬-೨೭ನೇ ಸಾಲಿನ ವಿಶೇಷ ಘಟಕ ಯೋಜನೆ(ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ(ಟಿಎಸ್‌ಪಿ) ಅಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಶೇ.೬೦ ಸಹಾಯಧನ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ೧೮ ವರ್ಷ ವಯೋಮಿತಿ ಪೂರೈಸಿರಬೇಕು. ಹೊಸ ಘಟಕಗಳಿಗೆ ಯೋಜನೆ ವೆಚ್ಚದ ಶೇ.೬೦ ರಷ್ಟು(ಗರಿಷ್ಟ ರೂ.೫ ಲಕ್ಷ) ಸಹಾಯಧನ ನೀಡಲಾಗುವುದು. ಉತ್ಪಾದನಾ / ಸೇವಾ ಘಟಕಗಳನ್ನು ಪ್ರಾರಂಭಿಸಬೇಕು. ಫಲಾನುಭವಿಯು ಈ ಹಿಂದೆ ಬ್ಯಾಂಕ್ ಸಾಲ ಪಡೆದು ಸುಸ್ತಿದಾರರಾಗಿರತಕ್ಕದ್ದಲ್ಲ ಹಾಗೂ ಸರ್ಕಾರದ ಯಾವುದೇ ಯೋಜನೆಯಡಿ ರಿಯಾಯಿತಿ/ ಪ್ರೋತ್ಸಾಹ ಪಡೆದಿರತಕ್ಕದಲ್ಲ. ಘಟಕದ ಯೋಜನಾ ವೆಚ್ಚ ಗರಿಷ್ಟ ರೂ.೧೦ ಲಕ್ಷಗಳಾಗಿದ್ದು ಶೇ.೯೦ ರಷ್ಟನ್ನು ಹಣಕಾಸು ಸಂಸ್ಥೆ, ವಾಣಿಜ್ಯ ಬ್ಯಾಂಕ್, ಸಹಕಾರ ಸಂಸ್ಥೆಗಳಿAದ ಸಾಲ ಪಡೆಯುವುದು. ಉದ್ದಿಮೆದಾರರು ಯೋಜನಾ ವೆಚ್ಚದ ಶೇ.೧೦ ರಷ್ಟನ್ನು ಭರಿಸಬೇಕು. ಕೇವಲ ದುಡಿಮೆ ಬಂಡವಾಳ ಪಡೆದ ಘಟಕಗಳು ಸಹಾಯಧನ ಪಡೆಯಲು ಅರ್ಹರಲ್ಲ.

೨೦೨೫-೩೦ ರ ಕೈಗಾರಿಕಾ ನೀತಿಯನ್ವಯ ಅರ್ಹವಿರುವ ಕೈಗಾರಿಕಾ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುತ್ತದೆ (ಟೈಲರಿಂಗ್ ಮತ್ತು ರೆಡಿಮೆಡ್ ಗಾರ್ಮೆಂಟ್ಸ್ ಹೊರತುಪಡಿಸಿ). ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ಕಚೇರಿಯನ್ನು ಸಂಪರ್ಕಿಸಬಹುದು(ದೂರವಾಣಿ ಸಂಖ್ಯೆ: ೦೮೨೭೨-೨೨೮೭೪೬) ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.