ವೀರಾಜಪೇಟೆ, ಆ. ೩೦: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ವೀರಾಜಪೇಟೆ ಹಾಗೂ ಪೊನ್ನಂಪೇಟೆ ಘಟಕಗಳ ವತಿಯಿಂದ ಕ್ರಾಂತಿಯ ಜ್ಯೋತಿ : ಪ್ರವಾದಿ ಮುಹಮ್ಮದ್ (ಸ) ಅಭಿಯಾನದ ಕಾರ್ಯಕ್ರಮ ಇತ್ತೀಚೆಗೆ ವೀರಾಜಪೇಟೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್, ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ನೀಡಿದ ಸಂದೇಶವು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ ಹಾಗೂ ಮಾನವ ಘನತೆಯ ಮೇಲೆ ಆಧಾರಿತವಾದ ಮಾನವೀಯ ಕ್ರಾಂತಿಯಾಗಿದೆ. ಈ ಸಂದೇಶವು ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಸುಭಿಕ್ಷೆ ಹಾಗೂ ನಿರ್ಭಯ ಸಮಾಜ ನಿರ್ಮಾಣ ಅವರ ಪ್ರಮುಖ ಆಶಯವಾಗಿತ್ತು ಎಂದರು. ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ‍್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಸಮಿತಿ ಸದಸ್ಯ ಕೆ.ಟಿ. ಬಶೀರ್, ಗೋಣಿಕೊಪ್ಪ ಘಟಕದ ಸ್ಥಾನೀಯ ಅಧ್ಯಕ್ಷ ತನ್ವೀರ್ ಅಹಮದ್, ಸದಸ್ಯರಾದ ಮೌಲಾನ ಸಗೀರ್ ಅಝಾರಿ ಹಾಗೂ ಎ.ಎ. ಉಮ್ಮರ್ ಉಪಸ್ಥಿತರಿದ್ದರು.