ವೀರಾಜಪೇಟೆ, ಆ.೩೦: ಸಮತೋಲಿತ ಆಹಾರ ಸೇವನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯುವ ಕುರಿತು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಜಾಗೃತಿ ಮೂಡಿಸಲಾಯಿತು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಗ್ರಾಮೀಣ ಕಾರ್ಯಾನುಭವ ಶಿಬಿರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕೀರ್ತನಾ ಹಾಗೂ ನಯನ ಅವರು ‘ನಮ್ಮ ತಟ್ಟೆ-ನಮ್ಮ ಆರೋಗ್ಯ’ ಘೋಷಣೆಯ ಮೂಲಕ ಸಮತೋಲಿತ ಆಹಾರದ ಮಹತ್ವವನ್ನು ವಿವರಿಸಿದರು.

ದೈನಂದಿನ ಆಹಾರದಲ್ಲಿ ಧಾನ್ಯಗಳು, ಬೇಳೆಕಾಳುಗಳು, ಹಾಲು, ಮೊಟ್ಟೆ, ಹಣ್ಣು ಹಾಗೂ ತರಕಾರಿಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಮಹಿಳೆಯರಲ್ಲಿ ಕಂಡುಬರುವ ಪಿಸಿಒಡಿ ಹಾಗೂ ಪಿಸಿಒಎಸ್ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಮತೋಲಿತ ಆಹಾರ, ಯೋಗ ಮತ್ತು ನಿಯಮಿತ ವ್ಯಾಯಾಮದ ಪಾತ್ರದ ಬಗ್ಗೆಯೂ ಅರಿವು ಮೂಡಿಸಿದರು. ಬಳಿಕ ವಿದ್ಯಾರ್ಥಿಗಳಾದ ಪೃಥ್ವಿ ಹಾಗೂ ವಿಶ್ವಸಾಗರ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಮಾತೃಶ್ರೀ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ ಹಾಗೂ ಸ್ಟ್ಯಾಂಡ್ ಅಪ್ ಇಂಡಿಯಾ ಸೇರಿದಂತೆ ವಿವಿಧ ಯೋಜನೆಗಳ ಉದ್ದೇಶ, ಅರ್ಹತಾ ಮಾನದಂಡಗಳು ಹಾಗೂ ಪ್ರಯೋಜನಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರಮೀಳ, ಆಯಿಶಾ, ಒಕ್ಕೂಟದ ಸದಸ್ಯರು ಹಾಗೂ ಅರಣ್ಯ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.