ಮಡಿಕೇರಿ, ಆ. ೩೦: ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾದರೂ ತೊಂದರೆಯಿಲ್ಲ ಆದರೆ, ಕಳಪೆ ಕಾಮಗಾರಿಗೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿ ನಗರದ ಸಂಪಿಗೆ ಕಟ್ಟೆಯಿಂದ ಮಹದೇವಪೇಟೆಯ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ ೮೦ ಲಕ್ಷ ರೂ ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನ ೫೦ ಕೋಟಿ ರೂಗಳಲ್ಲಿ ೩.೫ ಕೋಟಿ ರೂಗಳನ್ನು ಮಡಿಕೇರಿ ನಗರದ ರಸ್ತೆ ಕಾಮಗಾರಿಗಳಿಗೆ ನೀಡಿದ್ದು ಮುಂದೆ ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದು ಅದರಲ್ಲಿ ಮಡಿಕೇರಿ ನಗರದ ರಸ್ತೆ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ಬಿಲ್ ಪಾವತಿ ತಡೆ ಹಿಡಿಯಲಾಗುವುದು. ಸ್ಥಳೀಯರು ಕಾಮಗಾರಿ ನಡೆಯುವಾಗ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಮಡಿಕೇರಿ ನಗರಕ್ಕೆ ಸೋಮವಾರಪೇಟೆ, ಹಾಸನ ಭಾಗದಿಂದ ಬರುವ ವಾಹನಗಳು ಬಳಕೆ ಮಾಡುವ ಈ ರಸ್ತೆ ಅನೇಕ ವರ್ಷಗಳಿಂದ ದುರಸ್ತಿಯಾಗಿರಲಿಲ್ಲ. ಜನರ ಆಶಯಗಳಿಗೆ ಪೂರಕವಾಗಿ ಶಾಸಕರು ಅನುದಾನ ಒದಗಿಸಿದ್ದಾರೆ ಎಂದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಸಭೆ ಅಧ್ಯಕ್ಷೆ ಕಲಾವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ. ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ನಗರ ಸಭೆ ಇಂಜಿನಿಯರ್ ಹೇಮಂತ್, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಚುಮ್ಮಿದೇವಯ್ಯ, ನಗರ ಸಭಾ ಸದಸ್ಯರಾದ ಕೆ.ಎಸ್.ರಮೇಶ್, ಅಪ್ಪಣ್ಣ, ಅರುಣ್ ಶೆಟ್ಟಿ, ಎಸ್.ಸಿ. ಸತೀಶ್, ಮನ್ಸೂರ್, ಸವಿತಾ ರಾಕೇಶ್, ಸಬಿತಾ, ಜಿ.ಸಿ. ಜಗದೀಶ್, ಮುದ್ದುರಾಜ್, ಪ್ರಚಾರ ಸಮಿತಿ ಅಧ್ಯಕ್ಷರಾದ ವಿ.ಜಿ. ಮೋಹನ್, ಕೆ.ಪಿ.ಸಿ.ಸಿ ಸದಸ್ಯ ಯಾಕುಬ್, ಕೋಚನ ಹರಿಪ್ರಸಾದ್, ವಸಂತ್ ಭಟ್, ಕವನ್ ಕೊತ್ತೋಳಿ, ಕಾಲೀದ್ ಹಾಕತ್ತೂರು, ಶರಣ್, ಕೆ.ಜೆ. ಪೀಟರ್, ರವೂಫ್, ಮುನೀರ್ ಮಾಚರ್, ರಿಯಾಸುದ್ದೀನ್, ಸುಬ್ರಮಣಿ, ಸೇರಿದಂತೆ ಸ್ಥಳೀಯ ನಾಗರಿಕರು ಹಾಜರಿದ್ದರು.