ನಾಪೋಕ್ಲು, ಆ.೨೮: ಕ್ರೀಡೆಗಳು ಕೈಲ್‌ಪೊಳ್ದ್ ಹಬ್ಬಕ್ಕೆ ಮಾತ್ರ ಸೀಮಿತವಾಗದೆ, ಜನಾಂಗದವರು ಒಗ್ಗೂಡಿ ಕ್ರೀಡಾಕೂಟಗಳನ್ನು ಆಯೋಜಿಸುವಂತಾಗಬೇಕು ಎಂದು ಬೆಂಗಳೂರಿನ ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೊಪ್ಪಂಡ ಮಹೇಶ್ ತಿಮ್ಮಯ್ಯ ಕರೆ ನೀಡಿದರು.
ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಭಗವತಿ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಕೈಲ್‌ಪೊಳ್ದ್ ಹಬ್ಬದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾಲ್ಕುನಾಡು ವ್ಯಾಪ್ತಿಯಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಇಳಿಮುಖವಾಗುತ್ತಿರುವುದು ಬೇಸರದ ಸಂಗತಿ. ಬಹುಜನಾಂಗೀಯ ಸಮಾಜವಿರುವ ನಾಪೋಕ್ಲುವಿನಲ್ಲಿ ಎಲ್ಲರೂ ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು. ಭಗವತಿ ಯುವಕ ಸಂಘ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಆಶಿಸಿದರು.
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ಸತೀಶ್ ದೇವಯ್ಯ ಹಾಗೂ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗವತಿ ಯುವಕ ಸಂಘದ ಅಧ್ಯಕ್ಷ ಬೊಪ್ಪಂಡ ವೀರನ್ ಮುದ್ದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಕುಲ್ಲೇಟಿರ ದೇವಿ ಹಾಗೂ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೋಕಿರ ಪ್ರಭು ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, ಸ್ಕೂಟರ್ ಮಂದಗತಿ ಚಾಲನೆ ಹಾಗೂ ಗೋಣಿ ಚೀಲ ಓಟ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಕುಲ್ಲೇಟಿರ ದೇಚಮ್ಮ ಪ್ರಾರ್ಥಿಸಿದರು. ಕುಲ್ಲೇಟಿರ ದೀಪು ದೇವಯ್ಯ ಹಾಗೂ ಅಜ್ಜೆಟ್ಟಿರ ವಿಕ್ರಂ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.