ಕುಶಾಲನಗರ, ಆ. ೨೯: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆಗಳ ಗುರುತು ಕಂಡುಬರುತ್ತಿರುವ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಸಮೀಪ ಅಂದಗೋವೆ ಕಾಫಿ ತೋಟವೊಂದರಲ್ಲಿ ಹುಲಿ ಸಾಗಿರುವ ಹೆಜ್ಜೆ ಕಂಡುಬAದಿದ್ದು ಒಂದೆಡೆಯಾದರೆ ಇನ್ನೊಂದೆಡೆ ಎರಡು ದಿನಗಳ ಹಿಂದೆ ಆನೆಕಾಡು ಅರಣ್ಯ ಡಿಪೋ ಬಳಿ ಹುಲಿಯೊಂದು ಹೆದ್ದಾರಿ ರಸ್ತೆ ದಾಟಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಹೆಣಗಾಡುತ್ತಿರುವುದು ನಿರಂತರ ಪ್ರಕ್ರಿಯೆಯಾಗಿದ್ದು, ಈ ನಡುವೆ ಅಂದಗೋವೆಯ ಕಾಫಿ ತೋಟವೊಂದರಲ್ಲಿ ಹುಲಿ ಹೆಜ್ಜೆಗಳ ಗುರುತು ಗೋಚರಿಸಿ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೆದಿದೆ.
ಗುರುವಾರ ರಾತ್ರಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಆನೆಕಾಡು ಡಿಪೋ ಬಳಿ ಹುಲಿಯೊಂದು ಅರಣ್ಯದಿಂದ ರಸ್ತೆ ದಾಟುತ್ತಿದ್ದ ದೃಶ್ಯ ಗೋಚರಿಸಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಆನೆಕಾಡು ರಕ್ಷಿತಾರಣ್ಯದಿಂದ ಹೆದ್ದಾರಿ ದಾಟಿ ಅತ್ತೂರು ಅರಣ್ಯ ವಲಯ ಕಡೆಗೆ ಹುಲಿಯು ದಾಟಿರುವುದನ್ನು ಪ್ರತ್ಯಕ್ಷವಾಗಿ ಕಂಡಿರುವುದಾಗಿ ವಾಹನ ಸವಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅರಣ್ಯ ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿ ಗೋಚರಿಸಿದ ಹೆಜ್ಜೆ ಗುರುತನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಶಕ್ತಿಗೆ ತಿಳಿಸಿದ್ದಾರೆ. ಅಂದಗೋವೆ ತೋಟದಲ್ಲಿ ಕಂಡು ಬಂದ ಹೆಜ್ಜೆ ಗುರುತು ಹುಲಿಯ ಹೆಜ್ಜೆ ಅಲ್ಲ ಎಂಬುದನ್ನು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. - ಚಂದ್ರಮೋಹನ್