ಮಡಿಕೇರಿ, ಆ. ೨೯: ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರನ್ನು ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ಪ್ರಕಟಿಸಿದ್ದು, ಈ ಪೈಕಿ ಕೊಡಗಿನ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ದೀಪಾಭಾಸ್ತಿಯೂ ಸೇರಿದ್ದಾರೆ.

ಕರ್ನಾಟಕದಿಂದ ಕಲೆ ಮತ್ತು ಸಾಹಿತ್ಯ ವಿಭಾಗದಲ್ಲಿ ಆಯ್ಕೆಯಾದ ಮೂವರಲ್ಲಿ ಮಡಿಕೇರಿಯ ದೀಪಾಭಾಸ್ತಿ ಕೂಡ ಒಬ್ಬರಾಗಿರುವುದು ವಿಶೇಷ. ದೀಪಾಭಾಸ್ತಿ ಹೊರತುಪಡಿಸಿದಂತೆ ಹೆಸರಾಂತ ಸಿನಿಮಾ ನಿರ್ದೇಶಕ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮತ್ತು ಹಾಸನದ ಸಾಹಿತಿ ಬಾನು ಮುಷ್ತಾಕ್ ಸೇರಿದ್ದಾರೆ.

೨೦೨೫ ರ ಜನವರಿಯಿಂದ ೨೦೨೬ ರ ಮಾರ್ಚ್ ೩೧ ರವರೆಗೆ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ ೧೦೦ ಮಂದಿಯಲ್ಲಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಕರ್ನಾಟಕದಿಂದ ಮೂವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬಾನು ಮುಷ್ತಾಕ್ ಅವರ ಎದೆಯ ಹಣತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ವಿಶ್ವದ ಪ್ರತಿಷ್ಟಿತ ಸಾಹಿತ್ಯ ಪ್ರಶಸ್ತಿಯಾದ ಬೂಕರ್ ಪ್ರಶಸ್ತಿಯನ್ನು ೨೦೨೫ನೇ ಸಾಲಿಗೆ ಪಡೆದುಕೊಂಡಿದ್ದ ದೀಪಾಭಾಸ್ತಿ ಈ ಮೂಲಕ ಮತ್ತೊಂದು ಸಾಧನೆಗೆ ಕಾರಣರಾಗಿದ್ದಾರೆ.

ಗಮನಾರ್ಹ ಎಂದರೆ ಕರ್ನಾಟಕದಿಂದ ಆಯ್ಕೆಯಾದ ದೀಪಾಭಾಸ್ತಿ ಮತ್ತು ಬಾನು ಮುಷ್ತಾಕ್ ಇಬ್ಬರೂ ಸಾಹಿತಿಗಳೇ ಮತ್ತು ಇವರೀರ್ವರಿಗೆ ಸಂದ ಬೂಕರ್ ಪ್ರಶಸ್ತಿ ಮತ್ತು ಆ ಪ್ರಶಸ್ತಿ ಬರಲು ಕಾರಣವಾದ ಕೃತಿಯಿಂದಾಗಿಯೇ ಈ ಇಬ್ಬರೂ ಸಾಹಿತಿಗಳು ಭಾರತದಲ್ಲಿ ಪ್ರಭಾವಿಗಳಾಗಿರುವುದು. ಬೂಕರ್ ಪ್ರಶಸ್ತಿಯನ್ನು ಅನುವಾದ ಸಾಹಿತ್ಯಕೃತಿಗಾಗಿ ಪಡೆದ ಮೊದಲ ಲೇಖಕಿ ಎಂಬ ಕೀರ್ತಿಯೂ ದೀಪಾಭಾಸ್ತಿಗೆ ಸಂದಿದೆ.

ಉಳಿದAತೆ ಸಾಹಿತ್ಯ ಲೋಕದಲ್ಲಿ ಖ್ಯಾತಿವೆತ್ತ ಅರುಂಧತಿ ರಾಯ್, ಕಿರಣ್ ದೇಸಾಯಿ ಸಿನಿಮಾ ರಂಗದಲ್ಲಿ ಶಾರೂಖ್ ಖಾನ್, ರಣವೀರ್ ಕಪೂರ್, ಅಲ್ಲು ಅರ್ಜುನ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಮೋಹನ್ ಲಾಲ್, ಮಮ್ಮೂಟಿ, ಗಾಯಕಿ ಸುನಿಧಿ ಚೌವಾಣ್, ಕ್ರೀಡಾತಾರೆ ನೀರಜ್ ಛೋಪ್ರಾ, ಸೇರಿದಂತೆ ೧೦೦ ಮಂದಿಯನ್ನು ವಿವಿಧ ಕ್ಷೇತ್ರಗಳಿಗೆ ಸೇರಿದಂತೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಪಡೆದದ್ದು ಹೆಮ್ಮೆ ತಂದಿದೆ. ಸಾಕಷ್ಟು ಪ್ರಭಾವಿಗಳ ನಡುವೇ ನನ್ನ ಹೆಸರನ್ನು ಆಯ್ಕೆ ಮಾಡಿರುವುದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ದೊಡ್ಡ ಗೌರವವೂ ನನಗೆ ಸಿಕ್ಕಿದ ತೃಪ್ತಿ ಇದೆ ಎಂದು ದೀಪಾಭಾಸ್ತಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕವನ್ನು ಈ ಮೂಲಕ ಗುರುತಿಸಿರುವುದು ಒಳ್ಳೆಯ ಬೆಳವಣಿಗೆ. ಕನ್ನಡದ ಲೇಖಕಿಯರ ಹೆಸರು ಈ ಪ್ರತಿಷ್ಠಿತ ಪಟ್ಟಿಯಲ್ಲಿದ್ದರೆ ಅದು ಕನ್ನಡಕ್ಕೆ ದೊರೆತೆ ಸೂಕ್ತ ಮಾನ್ಯತೆ ಎಂದೇ ಭಾವಿಸಿದ್ದೇನೆ ಎಂದೂ ದೀಪಾಭಾಸ್ತಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಪ್ರತಿಷ್ಠಿತ ಏಷ್ಟಾ ಕ್ರಿಯೇಟಿವ್ ರೈಟಿಂಗ್ ಪ್ರೋಗ್ರಾಮ್‌ನಲ್ಲಿ ಪಾಲ್ಗೊಳ್ಳಲು ಶೀಘ್ರದಲ್ಲಿ ದೀಪಾಭಾಸ್ತಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ.

- ಅನಿಲ್ ಎಚ್.ಟಿ.