ಕುಶಾಲನಗರ, ಆ. ೨೯: ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಪಾಲನ ವರದಿ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಇಲಾಖಾವಾರು ಅಧಿಕಾರಿಗಳು ಇಲಾಖೆಯಲ್ಲಿ ಕೈಗೊಂಡ ಕಾರ್ಯಕ್ರಮ ಅನುಷ್ಠಾನ ಮತ್ತು ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.

ಬಸವನಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಅಧ್ಯಕ್ಷರು ಸಿಡಿಪಿಓ ಶ್ರೀದೇವಿ ಅವರನ್ನು ಪ್ರಶ್ನಿಸಿದರು. ಶ್ರೀದೇವಿ ಈ ಬಗ್ಗೆ ಮಾಹಿತಿ ನೀಡಿ, ಈ ವಿಷಯ ಕುರಿತು ಉಪ ನಿರ್ದೇಶಕರ ಗಮನಕ್ಕೆ ತಂದ ಬಳಿಕ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಕರ್ತೆಯನ್ನು ಬೇರೆ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಜೇನುಕಲ್ಲು ಬೆಟ್ಟದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಗೆ ತಿಳುವಳಿಕೆ ನೋಟಿಸ್ ನೀಡಿದ ಮೇರೆಗೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಪ್ರತಿ ಅಂಗನವಾಡಿ ಕೇಂದ್ರಗಳಲ್ಲೂ ಬಾಲವಿಕಾಸ ಸಮಿತಿ ರಚಿಸಿ ಉತ್ತಮ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶಶಿಧರ್ ಅಧಿಕಾರಿಗೆ ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆ ಮಾಹಿತಿ ನೀಡಿದ ಶ್ರೀದೇವಿ ಅಂಗನವಾಡಿ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈಗಾಗಲೇ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಹಣ ಹಾಕದಂತೆ ಬ್ಯಾಂಕ್‌ಗಳಿಗೆ ತಿಳುವಳಿಕೆ ಪತ್ರ ನೀಡುವಂತೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಜೂನ್‌ನಿAದ ಜುಲೈ ತನಕ ಗೃಹಲಕ್ಷ್ಮಿ ಹಣ ಜಮೆಯಾಗಿದೆ. ಉಳಿದ ಫಲಾನುಭವಿಗಳಿಗೂ ಹಂತ ಹಂತವಾಗಿ ಪಾವತಿ ಆಗುತ್ತಿದೆ. ಇದುವರೆಗೆ ರೂ. ೪.೫ ಕೋಟಿ ಹಣ ಜಮೆಯಾಗಿದೆ. ಇದರಲ್ಲಿ ೧೨೨ ಮಂದಿ ಮೃತಪಟ್ಟಿದ್ದು, ಕೆಲವರನ್ನು ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಬಸವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ ಡಿಪೋದಲ್ಲಿ ಪೆಟ್ರೋಲ್ ಬಂಕ್ ರೆಡಿಯಾಗಿದೆ. ಎಲೆಕ್ಟಿçಕ್ ಚಾರ್ಜರ್ ಕೆಲಸದ ಪರಿಶೀಲನೆ ಬಾಕಿ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಮಲ್ಲೇಶ್ ತಿಳಿಸಿದರು.

ತಾಲೂಕಿನಲ್ಲಿ ೧೧೧೬ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲಾಗಿದೆ ಎಂದು ತಿಳಿಸಿದರು. ಗೃಹಜ್ಯೋತಿ ಯೋಜನೆ ಮಾಹಿತಿ ನೀಡಿದ ಚೆಸ್ಕಾಂ ಅಧಿಕಾರಿಗಳು ಒಟ್ಟು ೩೬೧೩೩ ಮನೆಗಳ ಪೈಕಿ ೨೬೦೪೫ ನೊಂದಾಯಿಸಲಾಗಿದೆ. ನಗರ ಪ್ರದೇಶದಲ್ಲಿ ಶೇ. ೭೦ ಗುರಿ ಸಾಧಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಅಪಾಯಕಾರಿ ೮೪ ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅನುದಾನ ಬಂದ ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಮಿತಿ ಸದಸ್ಯ ಕೃಷ್ಣೇಗೌಡ ಮಾತನಾಡಿ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದ ಅಂಚಿನ ಪ್ರದೇಶ ಅಳುವಾರದಲ್ಲಿರುವ ಕಬ್ಬಿಣದ ಕಂಬಗಳನ್ನು ಬದಲಿಸುವಂತೆ ಮನವಿ ಮಾಡಿದರು.

ಚೆಸ್ಕಾಂ ಇಲಾಖೆಗೆ ರೂ. ೪೦ ಕೋಟಿ ಅನುದಾನ ಬಂದರೂ ಕುಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮುಂದಿನ ಬಜೆಟ್‌ನಲ್ಲಿ ಎಲ್ಲಾ ಕಬ್ಬಿಣದ ಕಂಬಗಳನ್ನು ಬದಲಾವಣೆ ಮಾಡುವುದಾಗಿ ಹೇಳಿದರು.

ಪಡಿತರ ಆಹಾರ ವಿತರಣೆ ಕುರಿತು ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಜಾತಿ ಪಟ್ಟಿ, ಇಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ಸಾಧ್ಯವಾಗಿಲ್ಲ ಎಂದರು. ೨೦೧೩ನೇ ಇಸವಿಯಿಂದ ಇಲ್ಲಿಯ ತನಕ ೮೬೭೯ ಎಪಿಎಲ್ ಕಾರ್ಡುಗಳು ರದ್ದಾಗಿವೆ. ಪ್ರತಿ ವರ್ಷ ಇಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು ಎಂದರು.

ಯುವ ನಿಧಿಗೆ ನೊಂದಾಯಿಸುವವರ ಸಂಖ್ಯೆ ಕ್ಷೀಣಿಸಿದೆ. ರಾಜ್ಯದಲ್ಲಿ ಕೊಡಗು ಕೊನೆ ಸ್ಥಾನದಲ್ಲಿದೆ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಮಂಜುನಾಥ್, ಎಲ್ಲಾ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುತ್ತಿದ್ದೇವೆ ಎಂದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ವತಿಯಿಂದ ಅಳುವಾರ ವಿವಿಯಲ್ಲಿ ನಡೆಸಿದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಯಶಸ್ವಿಯಾಗಿದೆ. ಇಂತಹ ಕಾರ್ಯಾಗಾರಗಳನ್ನು ಆಗಾಗ ನಡೆಸಬೇಕು ಎಂದು ಶಶಿಧರ್ ಹೇಳಿದರು.

ಶೀಘ್ರದಲ್ಲಿ ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜಿಸುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಗ್ರಾಮಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳು ಸರ್ಕಾರದ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಬರುತ್ತಿದೆ. ಇದಕ್ಕೆ ಅವಕಾಶ ನೀಡಬೇಡಿ. ಅರ್ಜಿದಾರರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು. ದರಪಟ್ಟಿ ಅಳವಡಿಸಬೇಕು. ಸಮಿತಿ ರಚನೆ ಮಾಡಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಗ್ರಾಮ ಒನ್‌ನಿಂದ ಅರ್ಜಿ ಹಾಕಿದರೆ ಎಲ್ಲಾ ದಾಖಲೆಗಳು ಸರಿ ಇದ್ದರೂ ತಹಶೀಲ್ದಾರ್ ಕಚೇರಿ ಸಿಬ್ಬಂದಿಯೊಬ್ಬರು ಅನವಶ್ಯಕವಾಗಿ ಅರ್ಜಿ ತಿರಸ್ಕಾರ ಮಾಡುತ್ತಾರೆ ಎಂದು ಗ್ರಾಮ ಒನ್ ಸೇವಾ ಕೇಂದ್ರದ ಸಿಬ್ಬಂದಿಗಳು ಸಭೆ ದೂರಿದರು.

ಈ ಬಗ್ಗೆ ತಹಶೀಲ್ದಾರ್ ಅವರ ಮೂಲಕ ಸಂಬAಧಿಸಿದ ಸಿಬ್ಬಂದಿಗೆ ಎಚ್ಚರಿಕೆಯ ನೋಟಿಸ್ ನೀಡುವಂತೆ ಶಶಿಧರ್ ಸೂಚನೆ ನೀಡಿದರು. ಈ ಸಂದರ್ಭ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಶಿ ಭೀಮಯ್ಯ, ಸದಸ್ಯರಾದ ಮುಸ್ತಫ, ಕೂಡಿಗೆ ಅಣ್ಣಯ್ಯ, ತಾಲೂಕು ಸಮಿತಿ ಸದಸ್ಯರಾದ ಬಿ.ಸಿ. ಮಲ್ಲಿಕಾರ್ಜುನ, ಕೆ.ಇ. ಅಬ್ದುಲ್ ರಜಾಕ್, ಜೆ. ಫಿಲೋಮಿನಾ, ಎಸ್.ಎಸ್. ವಿವೇಕಾನಂದ, ಎಸ್.ಎ. ಶ್ರೀನಿವಾಸ, ಎನ್. ಶ್ರೀನಿವಾಸ್ ಕುಮಾರ್, ಯು.ಎಂ. ಕಿಶೋರ್, ಹೆಚ್.ಯು. ರಫೀಕ್ ಖಾನ್, ಎಂ.ಎ. ಆದಂ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಹಾಗೂ ಸಿಬ್ಬಂದಿ ಇದ್ದರು.