ಮಡಿಕೇರಿ, ಆ. ೨೮: ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು. ಮಕ್ಕಳ ಏಳಿಗೆಯು ಅವರ ಕುಟುಂಬದ ಪ್ರತಿ ಸದಸ್ಯನ ಕನಸು. ಪೋಷಕರು ಮತ್ತು ಶಿಕ್ಷಕರ ಶ್ರಮವೇ ವಿದ್ಯಾರ್ಥಿಗಳ ಯಶಸ್ಸಿಗೆ ದಾರಿ ತೋರುತ್ತದೆ ಎಂದು ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಯ ಉಪನಿರ್ದೇಶಕ ಗಣಪತಿ ಅಭಿಪ್ರಾಯಪಟ್ಟರು.

ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಡೆದ ೨೦೨೬-೨೭ನೇ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಪೋಷಕರ ಮತ್ತು ಶಿಕ್ಷಕರ ಕನಸು ಅಡಗಿರುತ್ತದೆ. ಅದೇ ಆ ಮಕ್ಕಳ ಏಳಿಗೆಯ ಮೊದಲ ಹೆಜ್ಜೆಗೆ ಸಹಾಯಕ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಆಶಯ ನುಡಿಗಳನ್ನಾಡಿದ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಶಿಕ್ಷಕರು ಇಂದು ಕೇವಲ ಶಿಕ್ಷಣ ನೀಡದೆ ಸರ್ಕಾರದ ಎಲ್ಲಾ ಕೆಲಸದಲ್ಲೂ ಭಾಗವಹಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ. ಶಿಕ್ಷಕರನ್ನು ಇತರೆ ಚಟುವಟಿಕೆಗಳಿಗೆ ನಿಯುಕ್ತಿಗೊಳಿಸದೆ ಕೇವಲ ಶಿಕ್ಷಣ ನೀಡಲು ಸೀಮಿತಗೊಳಿಸಿದರೆ ಅವರಿಂದ ಶಿಕ್ಷಣ ಕ್ಷೇತ್ರ ಮತ್ತು ಮಕ್ಕಳು ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳು ಸಾಧನೆ ಮಾಡಬೇಕಾದರೆ ಅವರಿಗೆ ಬದ್ಧತೆ ಮುಖ್ಯ. ಓದು ಕೇವಲ ಅಂಕಗಳಿಗೆ ಮಾತ್ರವಲ್ಲ ನಿಮ್ಮ ಬದುಕು ರೂಪಿಸಿಕೊಳ್ಳಲು ಅಂಕಗಳ ಜೊತೆಗೆ ಆಂತರಿಕ ಆತ್ಮಾಭಿಮಾನ ಮತ್ತು ಕುಶಲತೆ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ -೧ ರಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೂ ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆ-೧ ರಲ್ಲಿ ಶೇ. ೧೦೦ ಫಲಿತಾಂಶ ನೀಡಿದ ಕಾಲೇಜುಗಳನ್ನು ಗೌರವಿಸಿ ಆ ಕಾಲೇಜಿನ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು.

ಹಾಗೆಯೇ ವಿಶೇಷವಾಗಿ ಕೊಡಗಿನ ವಿವಿಧ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಇದರಲ್ಲಿ ದಿವಾಕರ ಕೆ.ಜೆ. ನಿವೃತ್ತ ಪ್ರಾಂಶುಪಾಲರು, ಶ್ರೀ ಕಾವೇರಿ ಪದವಿಪೂರ್ವ ಕಾಲೇಜು ಭಾಗಮಂಡಲ, ಬೆಳ್ಳಿಯಪ್ಪ ಬಿ.ಎಂ. ನಿವೃತ್ತ ಪ್ರಾಂಶುಪಾಲರು ಸ.ಪ.ಪೂ. ಕಾಲೇಜು ಸೋಮವಾರಪೇಟೆ, ಮಹೇಶ್ ಬಿ.ಟಿ. ನಿವೃತ್ತ ಪ್ರಾಂಶುಪಾಲರು ಭಾರತಿ ಪ.ಪೂ. ಕಾಲೇಜು ಮರಗೋಡು ಇವರೊಂದಿಗೆ ಇದೇ ತಿಂಗಳು ನಿವೃತ್ತಿ ಹೊಂದುತ್ತಿರುವ ಮದೆ ಮಹೇಶ್ವರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಿದ್ಧರಾಜು ಬೆಳ್ಳಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರು ಹಾಗೂ ಕೊಡಗು ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ಹೆಚ್. ನಾಗರಾಜ್ ವಹಿಸಿದ್ದರು.

ಕೊಡಗು ಜಿಲ್ಲಾ ಪ.ಪೂ. ಕಾಲೇಜಿನ ಪ್ರಾಂಶುಪಾಲರ ಸಂಘದ ನಿಕಟಪೂರ್ವ ಅಧ್ಯಕ್ಷೆ ದೇವಕಿ ಮತ್ತು ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳು, ಪುರಸ್ಕೃತರಾದ ಮಕ್ಕಳು, ಪೋಷಕರು, ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸರ್ಕಾರಿ ಪದವಿಪೂರ್ವ ಕಾಲೇಜು ಮಡಿಕೇರಿಯ ಎಲ್ಲಾ ಉಪನ್ಯಾಸಕರು ಪಾಲ್ಗೊಂಡಿದ್ದರು.

ಮಕ್ಕಳು ಪ್ರಾರ್ಥಿಸಿದರೆ, ಮಡಿಕೇರಿ ಸರ್ಕಾರಿ ಪ.ಪೂ. ಕಾಲೇಜಿನ ಸಮಾಜಶಾಸ್ತç ಉಪನ್ಯಾಸಕಿ ಮುಕ್ತಕೇಶಿ ಪಿ.ಆರ್. ನಿರ್ವಹಿಸಿದರು. ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ಪಿ.ಆರ್. ಸ್ವಾಗತಿಸಿದರೆ, ಶಿವಪ್ಪ ವಿ.ವಿ. ನಿರೂಪಿಸಿ, ಎಂ.ಎA. ಸೋಮಯ್ಯ ವಂದಿಸಿದರು.