ಸಿದ್ದಾಪುರ, ಆ. ೨೮: ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕೆಂಬ ಶ್ರೀ ನಾರಾಯಣ ಗುರುಗಳ ತತ್ವಗಳು ಇಂದು ಮೌಢ್ಯಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿವುದು ವಿಶೇಷವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.

ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್..ಡಿ.ಪಿ.) ಜಿಲ್ಲಾ ಯೂನಿಯನ್ ವತಿಯಿಂದ ಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯ ಅಂಗವಾಗಿ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳು ಜಾಗತಿಕವಾಗಿ ಉತ್ತಮ ಸಂದೇಶವನ್ನು ನೀಡಿದೆ. ಮನುಕುಲ ಇರುವವರೆಗೂ ಜಗತ್ತಿಗೆ ಸಾರಿರುವ ಸಂದೇಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೌಲ್ಯಾಧಾರಿತ ಜೀವನವನ್ನು ಮಾಡಬೇಕೆಂದು ಸಲಹೆ ನೀಡಿದ ಅವರು, ಕೊಡಗು ಜಿಲ್ಲೆಯಲ್ಲಿನ ಎಲ್ಲಾ ಜನಾಂಗದವರು ಜಿಲ್ಲೆಗೆ ತಮ್ಮದೇ ಆದ ಕೊಡುಗೆಗಳನ್ನು ವಿವಿಧ ರೂಪದಲ್ಲಿ ನೀಡಿರುವುದೇ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣವಾಗಿದೆ. ಗುರುಗಳ ಮೌಲ್ಯಗಳು ಆದರ್ಶಗಳು ಕೇವಲ ಆಚರಣೆಗೆ ಸೀಮಿತವಾಗದೆ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಶ್ರೀ ನಾರಾಯಣ ಗುರುಗಳು ಶ್ರೇಷ್ಠ ವ್ಯಕ್ತಿಯಾಗಿದ್ದು, ಅವರ ಆದರ್ಶ ಗುಣಗಳನ್ನು, ಸಂದೇಶಗಳನ್ನು ಪಾಲಿಸಬೇಕು. ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯ ಮಾಡಬೇಕು. ಗುರುಗಳ ಚಿಂತನೆ, ಆಶಯಗಳನ್ನು ಈಡೇರಿಸಲು ಇಂತಹ ಆಚರಣೆಗಳು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎಸ್.ಎನ್.ಡಿ.ಪಿ. ಸಂಘಟನೆಯು ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಕಾರ ಹೊಂದಿರುವ ಶಿಕ್ಷಣವನ್ನು ಪಡೆದರೆ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ನಾರಾಯಣ ಗುರುಗಳು ಉತ್ತಮ ಶಿಕ್ಷಣವನ್ನು ಶೋಷಿತ ಸಮಾಜ ಪಡೆಯುವುದು ಅತ್ಯವಶ್ಯಕ ಎಂಬುದನ್ನು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಎಸ್‌ಎನ್‌ಡಿಪಿ ಸಂಘಟನೆಯು ಶ್ರೀ ನಾರಾಯಣ ಗುರುಗಳ ಆದರ್ಶಗಳೊಂದಿಗೆ ಮುಂದುವರೆಯಬೇಕು. ಸಂಘಟನೆಯ ವತಿಯಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವAತೆ ಸಲಹೆ ನೀಡಿದರು.

ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಶ್ರೀ ನಾರಾಯಣ ಗುರುಗಳು ಶ್ರೇಷ್ಠ ಮಹಾನ್ ವ್ಯಕ್ತಿಯಾಗಿದ್ದು ಸಮಾಜವನ್ನು ಬದಲಾವಣೆ ಮಾಡುವ ಮೂಲಕ ಒಂದೇ ಜಾತಿ ಒಂದೇ ಮಾತು ಎಂಬ ಸಂದೇಶವನ್ನು ಸಾರುವ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸಿದಂತಹ ಮಹಾಚೇತನ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೂ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಅವರ ಕೊಡುಗೆ ಹೆಚ್ಚಾಗಿತ್ತು ಎಂದ ಅವರು ಗುರುಗಳ ಸಂದೇಶ, ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿಕ್ಷಣಕ್ಕೆ ಒತ್ತಾಸೆ ನೀಡಿದ ಗುರುಗಳು ಸಹಬಾಳ್ವೆ ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ನಮ್ಮ ದೇಶವಾಗಿದೆ ಎಂದ ಅವರು ಜಿಲ್ಲೆಯಲ್ಲಿ ಎಲ್ಲರೂ ಜಿಲ್ಲೆಯ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಸಹಕರಿಸುವ ಮೂಲಕ ಪರಸ್ಪರ ಬಾಂಧವ್ಯದಿAದ ಬಲಪಡಿಸುವ ಮೂಲಕ ಒಗ್ಗಟ್ಟಾಗಿ ಇರಬೇಕೆಂದು ಕಿವಿಮಾತು ಹೇಳಿದರು.

ಸಮಾಜಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದು ಅದನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಪರಸ್ಪರ ಬಾಂಧವ್ಯ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಎಸ್.ಎನ್.ಡಿ.ಪಿ. ಸಂಘಟನೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ಯುವ ಪೀಳಿಗೆಗೆ ನಾರಾಯಣ ಗುರುಗಳ ಸಂದೇಶ ಆದರ್ಶ ಗುಣಗಳನ್ನು ತಿಳಿಸಬೇಕೆಂದು ಸಲಹೆ ನೀಡಿದರು. ಗುರುಗಳ ವಿಚಾರಧಾರೆಗಳು ಸಮಾಜಕ್ಕೆ ಮಾದರಿಯಾಗಿದ್ದು, ಶಿಕ್ಷಣದಿಂದಾಗಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್ ಮಾತನಾಡಿ, ಮಕ್ಕಳಿಗೆ ವಿದ್ಯೆಯಿಂದ ತಮ್ಮ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದುಕೊಂಡು ಜೀವನದ ಮೌಲ್ಯವನ್ನು ಕಲಿತುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಅಧೀನದಲ್ಲಿ ಸುಮಾರು ೫೧ ಶಾಖೆಗಳನ್ನು ಹೊಂದಿದೆ ಎಂದರು. ೧೯೦೩ರಲ್ಲಿ ಪ್ರಾರಂಭವಾದ ಎಸ್.ಎನ್.ಡಿ.ಪಿ. ಸಂಘಟನೆಯು ೧೯೫೪ರಲ್ಲಿ ಜಿಲ್ಲೆಗೆ ಪದಾರ್ಪಣೆ ಮಾಡಿದೆ. ಜಿಲ್ಲೆಯ ಎಲ್ಲಾ ಸಮಾಜದೊಂದಿಗೆ ಬಾಂಧವ್ಯ ಇಟ್ಟುಕೊಂಡು ಉತ್ತಮ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಎಸ್.ಎನ್.ಡಿ.ಪಿ ಸಂಘಟನೆ ಜಿಲ್ಲೆಯಲ್ಲಿ ಬಲಿಷ್ಠ ಸಂಘಟನೆಯಾಗಿ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಸಮಾಜ ಬಾಂಧವರ ಆರ್ಥಿಕ, ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ನೆರವಾಗುವ ಮೂಲಕ ರಾಜ್ಯದಲ್ಲಿ ಸಂಘಟನೆ ಗುರುತಿಸಿಕೊಂಡಿದೆ ಎಂದ ಲೋಕೇಶ್, ಸಮಾಜ ಬಾಂಧವರು ಆರ್ಥಿಕ ಸಾಮಾಜಿಕ ರಾಜಕೀಯ ಶೈಕ್ಷಣಿಕವಾಗಿ ಬಲಿಷ್ಠರಾಗಬೇಕೆಂದು ಕರೆ ನೀಡಿದರು. ನಾರಾಯಣ ಗುರುಗಳ ಜಯಂತಿ ಆಚರಣೆಯಂದು ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಬಾರಿ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಬಾಂಧವರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮೊದಲು ಗುರುಪೂಜೆ, ಬಳಿಕ ನಿರ್ದೇಶಕ ಟಿ.ಕೆ ಸುಧೀರ್ ಅವರು ಧ್ವಜಾರೋಹಣ ನೆರವೇರಿಸಿದರು. ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮೆರವಣಿಗೆಗೆ ಚಾಲನೆ ನೀಡಿದರು.

ಆಕರ್ಷಕ ಶೋಭಾಯಾತ್ರೆ

ಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಎಸ್.ಎನ್.ಡಿ.ಪಿ. ಸಂಘಟನೆ ವತಿಯಿಂದ ನಡೆಸಲಾದ ಶೋಭಾಯಾತ್ರೆಯಲ್ಲಿ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗದಿAದ ಪಟ್ಟಣದ ಪ್ರಮುಖಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಮಹಿಳೆಯರ ಚಂಡೆ ಹಾಗೂ ಡೊಳ್ಳುಕುಣಿತ ಮೆರುಗು ತಂದಿತು.

ಪಟ್ಟಣ ಹಳದಿಮಯ

ಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಸಂಘಟನೆ ವತಿಯಿಂದ ಸಿದ್ದಾಪುರ ಪಟ್ಟಣ ಸುತ್ತಲೂ ಹಳದಿ ಬಾವುಟಗಳಿಂದ ಅಲಂಕೃತಗೊಳಿಸಲಾಗಿತ್ತು.

ಏಲ್ಲಿ ನೋಡಿದರೂ ಹಳದಿ ಬಾವುಟ ಹಾಗೂ ಮೆರವಣಿಗೆಯಲ್ಲಿ ಹಳದಿ ಕೊಡೆಗಳು ಕಂಡುಬAದು, ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ರಾಜ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್ ಮಹೇಶ್ ಕುಮಾರ್, ಎಸ್.ಎನ್.ಡಿ.ಪಿ ಯೂನಿಯನ್‌ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರ, ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್ . ಪ್ರಧಾನ ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಪದಾಧಿಕಾರಿಗಳಾದ ಗಿರೀಶ್ ಮಟ್ಟಂ ಮತ್ತು ಆಚರಣೆ ಸಮಿತಿಯ ಅಧ್ಯಕ್ಷ ಹರಿದಾಸ್ ಪಿ.ಎಸ್. ಕಾರ್ಯದರ್ಶಿ ರೆಜಿತ್ ಕುಮಾರ್ ಕೆ.ಕೆ. ಹಾಗೂ ಸಂಘಟನೆಯ ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು. ಇದೇ ಸಂದರ್ಭ ಶ್ರೀ ನಾರಾಯಣ ಗುರುಗಳ ಸಂಘಟನೆಯಲ್ಲಿ ಸದಸ್ಯರಾಗಿರುವ ಸದಸ್ಯರ ಮಕ್ಕಳ ಪ್ರತಿಭಾವಂತ ೧೦ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ೨೩ ಮಂದಿ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಯಿತು.

ರೆಜಿತ್ ಕುಮಾರ್ ಸ್ವಾಗತಿಸಿ, ಆರ್. ರಾಜನ್ ವಂದಿಸಿದರು. ಉಪನ್ಯಾಸಕಿ ಸುನಿತಾ ಗಿರೀಶ್ ಮತ್ತು ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕಣ್ಣೂರು ಜಿಲ್ಲೆಯ ಹರಿಶ್ರೀ ಫೋಕ್ ಮೇಘಾ ಶೋ ತಂಡದಿAದ ರಸಮಂಜರಿ ಕಾರ್ಯಕ್ರಮವು ಸೊಗಸಾಗಿ ಮೂಡಿಬಂದಿತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು .

ಚಿತ್ರ ವರದಿ ವಾಸು, ಎ.ಎನ್.