ವೀರಾಜಪೇಟೆ, ಆ. ೨೮: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಗ್ರಾಮೀಣ ಅರಣ್ಯ ಕೃಷಿ ಕಾರ್ಯಾನುಭವ ಶಿಬಿರದ ವತಿಯಿಂದ ಹೆಗ್ಗಳದ ಸರಕಾರಿ ಪ್ರೌಢಶಾಲೆಯಲ್ಲಿ ಹಾವು ಕಡಿತ ಮತ್ತು ಅರಣ್ಯ ದಲ್ಲಿ ಅಕ್ರಮವಾಗಿ ನಡೆಯುವ ಬೇಟೆಯಾಡುವ ಚಟುವಟಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಅರಣ್ಯ ವಿದ್ಯಾಲಯದ ಗ್ರಾಮೀಣ ಅರಣ್ಯ ಕೃಷಿ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳು ಶಾಲಾ ವಿದ್ಯಾರ್ಥಿಗಳಿಗೆ ಹಾವು ಕಡಿತವಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುತ್ತ ಹಾವು ಕಡಿದಾಗ ಹೆದರಿಕೊಳ್ಳದೆ, ಸಿನಿಮಾಗಳಲ್ಲಿ ತೋರಿಸುವಂತೆ ಬಾಯಿಯಿಂದ ವಿಷ ತೆಗೆಯುವ ಪ್ರಯತ್ನ ಹಾಗೂ ಹಾವು ಕಚ್ಚಿದ ಮೇಲ್ಭಾಗ ಗಂಟುಹಾಕುವ ಕೆಲಸ ಮಾಡದೆ ಕಚ್ಚಿದ ಹಾವು ವಿಷ ಪೂರಿತವೋ, ವಿಷ ರಹಿತವೋ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ನಂತರ ತಕ್ಷಣ ವೈದ್ಯಕೀಯ ನೆರವು ಪಡೆಯುವ ಮಹತ್ವದ ಕುರಿತು ಮಾಹಿತಿ ನೀಡಿ, ಹಾವುಗಳನ್ನು ಕಂಡಾಗ ಅವುಗಳಿಗೆ ತೊಂದರೆಗೊಳಿಸದೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು.

ಮುಂದುವರೆದು ಅರಣ್ಯದಲ್ಲಿ ನಡೆಯುವ ಅಕ್ರಮ ಬೇಟೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಇದೇ ಸಂದರ್ಭ ನಾಯಿ ಕಚ್ಚುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು. ನಾಯಿ ಕಚ್ಚಿದ ತಕ್ಷಣ ಪಾಲಿಸಬೇಕಾದ ಪ್ರಥಮ ಚಿಕಿತ್ಸೆ ಕುರಿತು ವಿವರಿಸುತ್ತ ಗಾಯವನ್ನು ಸಾಬೂನು ಮತ್ತು ಹರಿಯುವ ನೀರಿನಲ್ಲಿ ಕನಿಷ್ಟ ೧೫ ನಿಮಿಷಗಳ ಕಾಲ ಚೆನ್ನಾಗಿ ತೊಳೆಯಬೇಕು. ನಂತರ ಗಾಯಕ್ಕೆ ಆಂಟಿಸೆಪ್ಟಿಕ್ ಹಚ್ಚಿ, ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ಆಂಟಿ ರೇಬೀಸ್ ಲಸಿಕೆ ಪಡೆಯಬೇಕು ಎಂದು ತಿಳಿಸಿದರಲ್ಲದೆ, ತಮ್ಮ ಮನೆಯ ಸಾಕು ನಾಯಿಗಳಿಗೆ ರೇಬೀಸ್ ವಿರುದ್ಧದ ಲಸಿಕೆಯನ್ನು ನಿಯಮಿತವಾಗಿ ಹಾಕಿಸುವಂತೆ ಪೋಷಕರಿಗೆ ತಿಳಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು.