ಮಡಿಕೇರಿ, ಆ. ೨೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಎರಡು ದಿನಗಳ ಕರ್ನಾಟಕದ ಉತ್ತರ ಭಾಗದ ವಾಡೆ ಮನೆಗಳ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಯಿತು.

ಅರೆಭಾಷಿಕರ ಐನ್‌ಮನೆಗಳು ಹಾಗೂ ವಾಡೆ ಮನೆಗಳ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷ ಸದಾನಂದ ಮಾವಜಿಯವರ ನೇತೃತ್ವದ ಅಧ್ಯಯನ ಪ್ರವಾಸದ ವೇಳೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿರುವ ಸುಮಾರು ೮೫೦ ವರ್ಷದ ಭವ್ಯ ಇತಿಹಾಸ ವಿರುವ ಚಚಡಿ ದೇಸಾಯಿ ವಾಡೆಯನ್ನು ಪ್ರಧಾನವಾಗಿ ವೀಕ್ಷಿಸಿ ಅಧ್ಯಯನ ನಡೆಸಲಾಯಿತು.

ವಾಡೆಯಲ್ಲಿ ಪ್ರಸ್ತುತ ವಾಸ್ತವ್ಯವಿರುವ ನಾಗರಾಜ ದೇಸಾಯಿಯವರು ಮಾಹಿತಿ ನೀಡಿದರು. ೧೨ನೇ ಶತಮಾನದಲ್ಲಿ ರಟ್ಟರ ರಾಜವಂಶದ ಎರಡನೆಯ ಕಾರ್ತ್ಯವೀರ ನಿರ್ಮಿಸಿದ ಈ ಮಹಲ್ ಕೋಟೆಯಿಂದ ಆವೃತವಾಗಿದ್ದು ೨೫ ತಲೆಮಾರುಗಳನ್ನು ಕಂಡಿದ್ದು ಇದೀಗ ೨೬ನೇ ತಲೆಮಾರಿನ ದೇಸಾಯಿ ಕುಟುಂಬ ಇದನ್ನು ಮುನ್ನಡೆಸುತ್ತಿದೆ.

ಅಧ್ಯಯನದ ವೇಳೆ ತಂಡವು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಕೇಸರಕೊಪ್ಪ ಗ್ರಾಮದಲ್ಲಿರುವ ಕಿತ್ತೂರು ಶಾಸಕ ಬಾಬೂ ಸಾಹೇಬ ಪಾಟೀಲರು ವಾಸ್ತವ್ಯ ಇರುವ ವಾಡೆಗೂ ಭೇಟಿ ನೀಡಿತು.

ಈ ಸಂದರ್ಭ ಶಾಸಕ ಪಾಟೀಲ ದಂಪತಿಯರು ಅರೆಭಾಷೆ ಅಕಾಡೆಮಿ ಅಧ್ಯಯನ ತಂಡವನ್ನು ಬರಮಾಡಿಕೊಂಡರು. ಪ್ರವಾಸದ ಉಸ್ತುವಾರಿಯನ್ನು ಸದಸ್ಯ ಸಂಚಾಕ ಡಾ. ಜ್ಞಾನೇಶ್ ಎನ್.ಎ. ವಹಿಸಿದ್ದರು.

ತಂಡದಲ್ಲಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ಸೂದನ ಎಸ್. ಈರಪ್ಪ, ಪಿ.ಎಂ. ಸಂದೀಪ್, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚನ, ಪ್ರಕಾಶ್ ಕುದುಪಜೆ ಇವರುಗಳು ಭಾಗಿಯಾಗಿದ್ದರು.