ಗೋಣಿಕೊಪ್ಪಲು, ಆ. ೨೭: ಗೋಣಿಕೊಪ್ಪಲಿನಲ್ಲಿ ಶಿವಾಜಿ ಯುವ ಸೇನೆ ವತಿಯಿಂದ ಆಯೋಜಿಸಲಾಗಿದ್ದ ೩ನೇ ವರ್ಷದ ರಕ್ತದಾನ ಶಿಬಿರವು ಯಶಸ್ವಿಯಾಗಿ ನೆರವೇರಿತು. ಗೋಣಿಕೊಪ್ಪಲಿನ ಉಮಾಮಹೇಶ್ವರಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರಕ್ತದಾನದ ಮಹತ್ವವನ್ನು ತಿಳಿಸಿದರು. ಕೊಡಗಿನಲ್ಲಿ ರಕ್ತದ ಅಗತ್ಯತೆ ಹೆಚ್ಚಿದ್ದು, ಪ್ರತಿಯೊಬ್ಬ ನಾಗರಿಕರೂ ಸ್ವಯಂ ಆಸಕ್ತಿಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಡಿಕೇರಿ ಜಿಲ್ಲಾ ರಕ್ತದಾನ ಕೇಂದ್ರದ ಮುಖ್ಯಸ್ಥರಾದ ಡಾ. ಕರುಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ಆಗಾಗ್ಗೆ ರಕ್ತದ ಕೊರತೆ ಎದುರಾಗುತ್ತಿದ್ದು, ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕು ಎಂದರು. ಹಾಗೆಯೇ, ತಿತಿಮತಿ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶ್ವೇತ ರಕ್ತದಾನದ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳು ದೂರಾಗಿ, ಜಾಗೃತಿ ಮೂಡಿಸಬೇಕಾದÀ ಅಗತ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಹಲವು ಬಾರಿ ರಕ್ತದಾನ ಮಾಡಿ ಮಾದರಿಯಾಗಿರುವ ಬ್ಲಡ್ ಡೋನರ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಅಶ್ರಫ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶಿವಾಜಿ ಯುವ ಸೇನೆಯ ಅಧ್ಯಕ್ಷ ಎಲ್.ಎನ್. ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಗಯಾ ಕಾವೇರಪ್ಪ ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.