ಗೋಣಿಕೊಪ್ಪಲು, ಆ. ೨೭: ಪ್ರತಿಷ್ಠಿತ ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ಅಧೀನದ ದಶ ಮಂಟಪ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆ ನಗರದ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಕಳೆದ ಬಾರಿಯ ದಶಮಂಟಪ ಸಮಿತಿ ಅಧ್ಯಕ್ಷ ಶಾಜಿ ಅಚ್ಚುತ್ತನ್ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ದಶಮಂಟಪದ ಮುಂದಿನ ಸಾಲಿನ ಅಧ್ಯಕ್ಷರಾಗಿ ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕಾಡ್ಯಮಾಡ ಚೇತನ್, ಪ್ರಧಾನ ಕಾರ್ಯದರ್ಶಿಯಾಗಿ ಅರುವತ್ತೋಕ್ಲು ಶಾರದಾಂಭ ದಸರಾ ಸಮಿತಿಯ ಹೆಚ್.ಎಸ್. ಸಜನ್ ದಶಮಂಟಪದ ಸರ್ವ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆಗೊಳಿಸಿದರು.
ಸಭೆಯ ಆರಂಭದಲ್ಲಿ ಮಾರ್ಕೆಟ್ ನವಚೇತನ ದಸರಾ ಸಮಿತಿಯ ಪ್ರಮುಖರಾದ ಅಬ್ದುಲ್ ಜಲೀಲ್ ಪ್ರಸ್ತಾಪಿಸಿ, ಕಳೆದ ಬಾರಿ ಶೋಭಾಯಾತ್ರೆಯಲ್ಲಿ ಹಲವು ನ್ಯೂನ್ಯತೆಗಳು ಉಂಟಾದವು. ನಿಗದಿತ ಸಮಯದಲ್ಲಿ ನಿಲ್ದಾಣಕ್ಕೆ ಮಂಟಪಗಳು ಆಗಮಿಸಲಿಲ್ಲ. ಹಲವು ಮಂಟಪಗಳಿಗೆ ಡಿಜೆ ಸೌಂಡನ್ನು ನಿಲ್ಲಿಸಿದ್ದರೂ ಅವರುಗಳ ಮೇಲೆ ದೂರು ದಾಖಲಾಗಿದೆ. ನ್ಯಾಯಾಲಯದಲ್ಲಿ ದಂಡ ಕಟ್ಟಿಸಲಾಗಿದೆ. ಇದರಿಂದ ದಸರಾಕ್ಕೆ ಹಿನ್ನಡೆಯಾಗಿದೆ.ಈ ಬಗ್ಗೆ ಅಧ್ಯಕ್ಷರು ಸಮಜಾಯಿಸಿಕೆ ನೀಡುವಂತೆ ಒತ್ತಾಯಿಸಿದರು.
ಶಾಜಿ ಅಚ್ಚುತ್ತನ್ ಪ್ರತಿಕ್ರಿಯಿಸಿ, ಡಿಜೆ ಅಳವಡಿಕೆಯ ಬಗ್ಗೆ ಪ್ರಕರಣ ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ ಎಂದು ಹೇಳುತ್ತಿದ್ದಂತೆಯೇ ಸಭೆಯಲ್ಲಿದ್ದ ಸದಸ್ಯರು, ಮಂಟಪದ ಅಧ್ಯಕ್ಷರುಗಳು ಆಕ್ಷೇಪ ವ್ಯಕ್ತಪಡಿಸಿದರು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭ ಶಾರಾದಾಂಭ ದಸರಾ ಸಮಿತಿಯ ನವೀನ್ ಮಾತನಾಡಿ ಡಿಜೆ ಅಳವಡಿಸಿದ ಟ್ರಾö್ಯಕ್ಟರ್ ಚಾಲಕ ಹಾಗೂ ಡಿಜೆಯವರಿಗೆ ೩ ಸಾವಿರ ದಂಡ ವಿಧಿಸಲಾಗಿದೆ. ೪ ಸಮಿತಿಗಳಿಗೆ ಮಾತ್ರ ದಂಡ ವಿಧಿಸಿದ್ದಾರೆ. ಉಳಿದ ಮಂಟಪಗಳನ್ನು ಬಿಟ್ಟಿದ್ದಾರೆ. ಇದರಿಂದ ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಒಂದು ನ್ಯಾಯ ಎಂದು ಸಭೆಯ ಮುಂದಿಟ್ಟರು. ಈ ವೇಳೆ ಸಭೆಯು ಕಾವೇರಿದ ಚರ್ಚೆಗೆ ಗ್ರಾಸವಾಯಿತು.
ಈ ವೇಳೆ ಮಾತನಾಡಿದ ಯುವ ದಸರಾ ಸಮಿತಿಯ ಅಧ್ಯಕ್ಷ ಕೆ. ರಾಜೇಶ್, ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ಆಗಮಿಸುತ್ತಿದ್ದ ವೇಳೆ ಪೊಲೀಸರ ಸೂಚನೆ ಮೇರೆ ಡಿಜೆ ಸೌಂಡ್ ನಿಲ್ಲಿಸಲಾಯಿತು. ಈ ವೇಳೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿಜೆ ಇಲ್ಲದೆ ಮಂಟಪ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಮಸ್ಯೆ ಉಂಟಾಯಿತು. ಪೊಲೀಸರು ಮಧ್ಯೆ ಪ್ರವೇಶಿಸಿದರೂ ಪ್ರಯೋಜನವಾಗಲಿಲ್ಲ. ಜನರು ಇದರಿಂದ ಕಡಿಮೆಯಾದರು ಎಂದರು. ಈ ಬಾರಿ ಅಂತಹ ಸಮಸ್ಯೆಗಳು ಎದುರಾಗದಂತೆ ಎಲ್ಲರೂ ಒಗ್ಗಟ್ಟಾಗಿ ಗೋಣಿಕೊಪ್ಪ ದಸರಾವನ್ನು ಯಶಸ್ವಿಗೊಳಿಸೋಣ ಎನ್ನುವ ಮೂಲಕ ವಿಷಯಕ್ಕೆ ತೆರೆ ಎಳೆದರು.
ಕಾವೇರಿ ದಸರಾ ಸಮಿತಿಯ ಕಳೆದ ಸಾಲಿನ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ದಸರಾ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ. ದಸರಾ ನಡೆಸುವುದು ಸುಲಭದ ಮಾತಲ್ಲ. ವ್ಯತ್ಯಾಸಗಳು ಬಂದಾಗ ಅದನ್ನು ಅಲ್ಲಿಯೇ ಸರಿಪಡಿಸಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.
ದಶಮAಟಪ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಕೆಲವು ನಿಯಮಗಳನ್ನು ಜಾರಿಗೊಳಿಸಬೇಕು. ವರ್ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆ ಕಡ್ಡಾಯಗೊಳಿಸಬೇಕು. ಶೋಭಾಯಾತ್ರೆಯ ಸಂದರ್ಭದಲ್ಲಿ ಬಹುಮಾನ ವಿತರಣೆ, ಮಂಟಪಗಳಿಗೆ ನೀಡುವ ಬಹುಮಾನದ ಮೊತ್ತ, ತೀರ್ಪುಗಾರರ ನೇಮಕ, ಇವುಗಳ ಬಗ್ಗೆ ಅಧ್ಯಕ್ಷರಿಗೆ ಅಧಿಕಾರ ನೀಡಬೇಕು ಎಂದು ಅರುವತ್ತೊಕ್ಕಲು ಶಾರದಾಂಭ ದಸರಾ ಸಮಿತಿಯ ಹೆಚ್.ಎಸ್. ಸಜನ್ ಸಭೆಯ ಮುಂದೆ ಪ್ರಸ್ತಾಪ ಸಲ್ಲಿಸಿದರು. ಇದಕ್ಕೆ ಸಭೆಯ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಡಿಜೆ ಸೌಂಡ್ ಅಳವಡಿಕೆ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಮಿತಿಯು ಒಮ್ಮತ್ತದ ನಿರ್ಣಯ ಕೈಗೊಂಡಿತು. ಸಭೆಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳಾದ ಮುರುಗ, ಗೋವಿಂದಪ್ಪ,ಅಬ್ದುಲ್ ಜಲೀಲ್, ನವೀನ್, ಸೇರಿದಂತೆ ಪ್ರಮುಖರು ಹಲವು ವಿಷಯಗಳನ್ನು ಚರ್ಚಿಸಿದರು.
ಸಭೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ, ೧ನೇ ವಿಭಾಗದ ದಸರಾ ನಾಡ ಹಬ್ಬ ಸಮಿತಿ, ೨ನೇ ವಿಭಾಗದ ಸರ್ವರ ದಸರಾ ಸಮಿತಿ, ೩ನೇ ವಿಭಾಗದ ಯುವ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ, ಮಾರುಕಟ್ಟೆಯ ನವಚೇತನ ದಸರಾ ಸಮಿತಿ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಅರುವತ್ತೊಕ್ಕಲು ಮೈಸೂರಮ್ಮ ನÀಗರದ ಶಾರಾದಾಂಭ ದಸರಾ ಸಮಿತಿ, ಕೈಕೇರಿಯ ಭಗವತಿ ದಸರಾ ಸಮಿತಿ ಅರುವತ್ತೊಕ್ಕಲು ಕಾಫಿ ಬೋರ್ಡಿನ ಕಾಡ್ಲಯ್ಯಪ್ಪ ದಸರಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ದಶಮಂಟಪದ ಕಳೆದ ಸಾಲಿನ ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ ಸ್ವಾಗತಿಸಿ, ವಂದಿಸಿದರು.
-ಹೆಚ್.ಕೆ. ಜಗದೀಶ್