ಮಡಿಕೇರಿ, ಆ. ೨೭: ನಗರದ ಸುಬ್ರಮಣ್ಯ ನಗರದಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಕಸಗಳನ್ನು ವಿಲೇವಾರಿ ಮಾಡಲು ಇರುವ ಘಟಕದಲ್ಲಿ ಕಸವಿಲೇವಾರಿ ಮಾಡಲು ಪ್ರಸ್ತುತ ಜಾಗದ ಕೊರತೆಯಿದೆ ಎಂಬ ವಿಚಾರ ಇಂದು ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿತು. ವಿಸ್ತೃತ ಚರ್ಚೆಯ ಬಳಿಕ ಕಸವಿಲೇವಾರಿಗೆ ಜಾಗ ಪಡೆಯುವ ನಿಟ್ಟಿನಲ್ಲಿ ತಾ. ೨೮ ರಂದು (ಇಂದು) ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಗೆ ಆಗಮಿಸಲಿರುವ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.

ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ೨ನೇ ಮೊಣ್ಣಂಗೇರಿಯಲ್ಲಿ ಗುರುತಿಸಲಾದ ೧೦ ಎಕರೆ ಜಾಗ ಡೀಮ್ಡ್ ಫಾರೆಸ್ಟ್ ಅಡಿಯಲ್ಲಿ ಬರುವುದರಿಂದ ಹಾಗೂ ಕಸ್ತೂರಿ ರಂಗನ್ ವರದಿಗೆ ಒಳಪಡುವುದರಿಂದ ಪರಿಸರ ಅನುಮೋದನೆ ಪಡೆಯಲು ಕಷ್ಟಸಾಧ್ಯವಾಗಿರುವುದರಿಂದ ಜಿಲ್ಲಾಧಿಕಾರಿಗಳು ಕಾಟಕೇರಿ ಗ್ರಾಮದ ಸ.ನಂ. ೧/೧ರಲ್ಲಿ ೫ ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಕಸವಿಲೇವಾರಿ ಉದ್ದೇಶಕ್ಕೆ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂಬ ಬಗ್ಗೆ ಅಧಿಕಾರಿ ಸಭೆಯ ಗಮನಕ್ಕೆ ತಂದರು.

ಈ ವೇಳೆ ಮಾತನಾಡಿದ ವಿಪಕ್ಷ ಸದಸ್ಯ ಅಮಿನ್ ಮೊಯ್ಸಿನ್ ಈಗಾಗಲೇ ಗುರುತಿಸಲಾಗಿದ್ದ ೧೦ ಎಕರೆ ಜಾಗದ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ನಗರಸಭೆಯಿಂದ ವ್ಯಯಿಸಲಾಗಿದ್ದು, ಆ ಹಣವನ್ನು ಭರಿಸುವವರಾರು ಎಂದು ಪ್ರಶ್ನಿಸಿದರು. ಸದಸ್ಯ ಅಪ್ಪಣ್ಣ ಮಾತನಾಡಿ, ಈಗ ಗುರುತಿಸಲಾಗಿರುವ ೫ ಎಕರೆ ಜಾಗವೂ ಸಮರ್ಪಕವಾಗಿಲ್ಲ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಬದಲಿ ಜಾಗ ಪಡೆಯಲು ಪಕ್ಷಾತೀತವಾಗಿ ಮುಂದಡಿ ಇಡಬೇಕಿದೆ. ಇಲ್ಲವಾದರೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಆಯುಕ್ತ ರಮೇಶ್, ಸುಬ್ರಮಣ್ಯ ನಗರದಲ್ಲಿ ಪ್ರಸ್ತುತ ಇರುವ ಕಸವಿಲೇವಾರಿ ಘಟಕದಲ್ಲಿ ಕಸವನ್ನು ವಿಲೇವಾರಿ ಮಾಡಲು ಜಾಗವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಕಸ ಎಲ್ಲಿ ಕುಸಿಯಲ್ಪಡುತ್ತದೊ ಎಂಬ ಭಯ ಎದುರಾಗಿದೆ. ಈ ನಿಟ್ಟಿನಲ್ಲಿ ಸಭೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನುಡಿದರು. ನಗರಸಭೆ ಅಧಿಕಾರಿ ಮಾತನಾಡಿ, ಹಸಿರುದಳ ಎಂಬ ಸಂಸ್ಥೆಯೊAದು ಮಡಿಕೇರಿಯ ಕಸ ನಿರ್ಮೂಲನೆ ಸಂಬAಧ ಮುಂದೆ ಬಂದಿದ್ದು, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಸದ ವಿಚಾರವಾಗಿ ಮಾಹಿತಿಗಳನ್ನು ಪಡೆದು ತೆರಳಿದೆ ಎಂದರು. ಆಯುಕ್ತ ರಮೇಶ್ ಅವರು ಮಾತನಾಡಿ, ಹಸಿರುದಳವನ್ನು ಬಳಸಿಕೊಂಡರೆ ಕಸವಿಲೇವಾರಿ ಸಂಬAಧ ಯಶಸ್ಸು ಕಾಣುವ ಸಾಧ್ಯತೆಯಿದ್ದು, ಸಭೆ ಒಪ್ಪಿದರೆ ಹಸಿರು ದಳದವರನ್ನು ಕರೆಸಿ ಅವರಿಂದ ಸದಸ್ಯರಿಗೆ ಮಾಹಿತಿ ಕೊಡಿಸಲಾಗುವುದು ಎಂದು ಹೇಳಿದರು. ಆದಷ್ಟು ಶೀಘ್ರ ದಿನಾಂಕ ನಿಗದಿ ಮಾಡಿ ಅವರನ್ನು ಕರೆಸುವಂತೆ ಸದಸ್ಯರು ಹೇಳಿದರು.

ಸದಸ್ಯ ಸತೀಶ್ ಮಾತನಾಡಿ, ಸರ್ವ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈಗಾಗಲೇ ಗುರುತಿಸಲಾಗಿದ್ದ ೧೦ ಎಕರೆ ಜಾಗದ ಸಂಬAಧ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡೋಣ ಎಂದರು. ಅಮಿನ್ ಮೊಯ್ಸಿನ್ ಮಾತನಾಡಿ, ಆ ಜಾಗದ ಅಭಿವೃದ್ಧಿಗೆ ಸಾಕಷ್ಟು ಹಣ ಖರ್ಚು ಮಾಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಆ ಜಾಗಕ್ಕಾಗಿ ಹೋರಾಟ ಮಾಡೋಣ ಈ ಬಗ್ಗೆ ನಿರ್ಣಯ ಮಾಡಿ ಎಂದರು. ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ, ೧೦ ಎಕರೆ ಜಾಗದ ಸರ್ವೆ ಆಗಿ ಆರ್‌ಟಿಸಿಯು ಸಿಕ್ಕಿದ್ದು, ಈಗ ಜಾಗವನ್ನು ಕೊಡಲಾಗುವುದಿಲ್ಲ ಎನ್ನುವುದು ಸರಿಯಲ್ಲ. ಆ ಜಾಗ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವುದಾದರೆ ಆ ವರದಿ ವಿರುದ್ಧ ನಿರ್ಣಯ ಮಾಡಿ ಕಳಿಸೋಣ ಎಂದು ಹೇಳಿದರು.

ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ ಈ ಸಮಸ್ಯೆ ಸಂಬAಧ ಸಾರ್ವಜನಿಕರನ್ನು ಸೇರಿಸಿಕೊಂಡು ಹೋರಾಟ ಮಾಡಬೇಕಿದೆ ಎಂದರು. ಚರ್ಚೆಯ ಬಳಿಕ ಕೊನೆಗೆ ತಾ. ೨೮ ರಂದು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಅಲ್ಲದೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

ಆಡಳಿತದ ವಿರುದ್ಧ ವಿಪಕ್ಷ ಆಕ್ರೋಶ

ಸಭೆಯ ಆರಂಭದಲ್ಲಿ ಮಾತನಾಡಿದ ಅಮಿನ್ ಮೊಯ್ಸಿನ್ ಬಹುಶಃ ಇದು ನಗರಸಭೆ ಆಡಳಿತದ ಕೊನೆಯ ಸಭೆ ಕಾಣುತ್ತದೆ ಎಂದು ಹೇಳುತ್ತಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಮುಂದಾದರು. ಈ ವೇಳೆ ಅಧ್ಯಕ್ಷೆ ಕಲಾವತಿ ಮಾತನಾಡಿ, ಇನ್ನು ಎರಡು ಸಭೆಗಳು ನಡೆಯಲಿದ್ದು, ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದರು. ಈ ವೇಳೆ ಮನ್ಸೂರ್ ಮಾತನಾಡಿ, ಎರಡೂವರೆ ವರ್ಷದಲ್ಲಿ ನೀವೇನು ಕೆಲಸ ಮಾಡಿದ್ದೀರಿ? ಅಧ್ಯಕ್ಷರೆ ಎಂದು ಪ್ರಶ್ನಿಸಿದರು; ನಗರ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು, ಕಸವಿಲೇವಾರಿ ಘಟಕ ನಿರ್ವಹಣೆ ಆಗುತ್ತಿಲ್ಲ. ಉಪ ಲೋಕಾಯುಕ್ತರೇ ನಗರಸಭೆ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ ಎಂದು ಅಮಿನ್ ಮೊಯ್ಸಿನ್ ಟೀಕಿಸಿದರು.

ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಉಪಾಧ್ಯಕ್ಷ ಮಹೇಶ್ ಜೈನಿ ಹೇಳಿದಾಗ, ಟೆಂಡರ್ ಆದರೆ ಸಾಕೆ, ಕೆಲಸ ಮಾಡಿಸುವ ಸಾಮರ್ಥ್ಯ ನಿಮಗೆ ಬೇಕಲ್ಲವೆ ಎಂದು ಅಮಿನ್ ಮೊಯ್ಸಿನ್ ಹೇಳಿದರು. ಉಪಲೋಕಾಯುಕ್ತರು ನಗರಸಭೆ ಆಡಳಿತಕ್ಕೆ ಛೀಮಾರಿ ಹಾಕಿದ್ದಲ್ಲ ನಗರಸಭೆಗೆ ಹಾಕಿದ್ದು, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೆ ನೀವು ಗಲಾಟೆ ಮಾಡಬೇಡಿ ಎಂದು ಮಹೇಶ್ ಜೈನಿ ಹೇಳಿದರು. ಸದಸ್ಯ ಮನ್ಸೂರ್ ಮಾತನಾಡಿ, ನಗರವ್ಯಾಪ್ತಿಯಲ್ಲಿ ಬೀದಿ ದೀಪಗಳು ಸಮರ್ಪಕವಾಗಿಲ್ಲ. ಇದರಿಂದಾಗಿ ಮೊನ್ನೆ ದಿನ ಜಿ.ಟಿ. ವೃತ್ತದ ಬಳಿ ಓರ್ವ ಯುವಕನ ಸಾವು ಸಂಭವಿಸಿತು. ಇದಕ್ಕೆ ನಗರಸಭೆಯೇ ಹೊಣೆ ಎಂದರು.

ಸಭೆಯನ್ನು ಅಜೆಂಡಾ ಪ್ರಕಾರ ನಡೆಸಲು ಅವಕಾಶ ಕೊಡಿ ಎಂದು ಮಹೇಶ್ ಜೈನಿ ಮನವಿ ಮಾಡಿದಾಗ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ; ನಿಮ್ಮ ಹಣೆಬರಹ ಜನರಿಗೆ ಗೊತ್ತಿದೆ ಎಂದು ಮನ್ಸೂರ್ ಕುಟುಕಿದರು. ನಿಮ್ಮ ಹಣೆಬರಹ ಏನು ಎಂಬದೂ ಕೂಡ ಎಲ್ಲರಿಗೂ ಗೊತ್ತಿದೆ ಎಂದು ಮಹೇಶ್ ಜೈನಿ ತಿರುಗೇಟು ನೀಡಿದರಲ್ಲದೆ, ೨೦೨೨ ರಿಂದ ಇಲ್ಲಿಯವರೆಗೆ ನಾವೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂಬ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಜನರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮನ್ಸೂರ್ ಮಾತನಾಡಿ, ನಗರಸಭೆಗೆ ವಿಶೇಷ ಅನುದಾನ ಕೋರಲು ನಿಯೋಗ ತೆರಳೋಣ ಎಂದು ನಾವು ಹೇಳಿದ್ದೆವು ನೀವು ನಿಯೋಗವನ್ನು ಕರೆದುಕೊಂಡು ಹೋದ್ರಾ? ಎಂದು ಪ್ರಶ್ನಿಸಿದರು. ನಿಮಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎಂದು ಅಮೀನ್ ಮೊಯ್ಸಿನ್ ದೂರಿದರು. ಹೀಗೆ ಆರೋಪ ಪ್ರತ್ಯಾರೋಪಗಳು ಮುಂದುವರಿಯುತ್ತಿದ್ದAತೆ ಮಧ್ಯಪ್ರವೇಶಿಸಿದ ಸದಸ್ಯ ಕೆ.ಎಸ್. ರಮೇಶ್ ಈಗ ನಿಮ್ಮ ಉದ್ದೇಶವಾದರೂ ಏನು? ಎಂದು ವಿಪಕ್ಷ ಸದಸ್ಯರನ್ನು ಪ್ರಶ್ನಿಸಿದರು. ಈ ವೇಳೆ ಮಾತಿನ ಚಕಮಕಿ ಉಂಟಾದಾಗ ವಿಪಕ್ಷ ಎಸ್‌ಡಿಪಿಐ ಸದಸ್ಯರು ‘ ಉಪಲೋಕಾಯುಕ್ತರಿಂದ ಅಧಿಕೃತ ನರಕ ಸಭೆ ಎಂದು ಛೀಮಾರಿ ಹಾಕಿಸಿಕೊಂಡ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕುರ್ಚಿ ಬಿಟ್ಟು ತೊಲಗಿ’ ಎಂಬಿತ್ಯಾದಿ ಬರಹಗಳನ್ನು ಒಳಗೊಂಡ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಕೆ.ಎಸ್. ರಮೇಶ್ ಸಭೆಯನ್ನು ಅಜೆಂಡಾ ಪ್ರಕಾರ ನಡೆಸಲು ಅವಕಾಶ ನೀಡದವರನ್ನು ಸಭೆಯಿಂದ ಹೊರಹಾಕಿ; ಇಲ್ಲವಾದರೆ ನಾವು ಸಭೆಯಿಂದ ಹೊರ ನಡೆಯುತ್ತೇವೆ ಎಂದರು. ಸಭೆಯನ್ನು ಸಮರ್ಪಕವಾಗಿ ನಡೆಸಲು ಅವಕಾಶ ಕೊಡಿ ಎಂದು ಸದಸ್ಯ ಮುಸ್ತಫ ಒತ್ತಾಯಿಸಿದರು. ವಿನಾಕಾರಣ ಚರ್ಚೆಗೆ ಅವಕಾಶ ಕೊಡಬೇಡಿ. ಅಜೆಂಡಾದAತೆ ಸಭೆ ನಡೆಯಲಿ ಎಂದು ಸದಸ್ಯರಾದ ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ ಆಗ್ರಹಿಸಿದರು. ಸಭೆ ಗೊಂದಲದ ಗೂಡಾಗುತ್ತಿದ್ದಂತೆ ಸದಸ್ಯರಾದ ಮುಸ್ತಫ, ರಾಜೇಶ್ ಯಲ್ಲಪ್ಪ ಸಭೆಯಿಂದ ಹೊರನಡೆದರು. ಇವರುಗಳ ಹಿಂದೆಯೇ ನಾಮನಿರ್ದೇಶಿತ ಸದಸ್ಯ ಯಾಕೂಬ್ ಕೂಡ ತೆರಳಿದರು.

ಕಸ್ತೂರಿರಂಗನ್ ವರದಿ ವಿರುದ್ಧ ಖಂಡನಾ ನಿರ್ಣಯ ಮಾಡಿ ಕಳಿಸುವ ಬಗ್ಗೆ ಉಮೇಶ್ ಸುಬ್ರಮಣಿ ಪ್ರಸ್ತಾಪಿಸಿದರು. ಕಸ್ತೂರಿ ರಂಗನ್ ವರದಿ ನಿಮ್ಮದೇ ಕೇಂದ್ರ ಸರ್ಕಾರ ಮಾಡಿರುವುದಲ್ಲವೇ ಎಂದು ಅಮಿನ್ ಮೊಯ್ಸಿನ್, ಮನ್ಸೂರ್ ಕುಟುಕಿದರು. ಈ ವೇಳೆ ಮಾತನಾಡಿದ ಮಹೇಶ್ ಜೈನಿ ಕೊಡಗಿನ ಜನರಿಗೆ ಕಸ್ತೂರಿ ರಂಗನ್ ವರದಿಯಿಂದ ತೊಂದರೆ ಆಗಬಾರದೆಂದು ಸಂಸದರು ಇಂದು ಸಭೆ ಕರೆದಿದ್ದರು. ಆ ಸಭೆಗೆ ನಾವು ತೆರಳಿ ನಮ್ಮ ನಿಲುವನ್ನು ತಿಳಿಸಿ ಬಂದಿದ್ದೇವೆ; ಆ ಸಭೆಗೆ ತೆರಳುವ ಯೋಗ್ಯತೆ ನಿಮಗಿಲ್ಲ ಎಂದು ಟೀಕಿಸಿದರು.

ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ವಿಪಕ್ಷದ ಪ್ರಶ್ನೆಗಳಿಗೆ ಆಡಳಿತ ಪಕ್ಷ ಉತ್ತರಿಸಲೇಬೇಕು. ಆದರೆ ವಿಪಕ್ಷ ಗೌರವಯುತವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕು ಎಂದರು. ಓರ್ವ ಬ್ಲಾಗರ್ ನಗರಸಭೆ ವ್ಯವಸ್ಥೆಯನ್ನು ನಿಂದಿಸಿದರಲ್ಲ ಎಂದು ಮತ್ತೆ ಅಮೀನ್ ಮೊಯ್ಸಿನ್ ಪ್ರಸ್ತಾಪಿಸಿದಾಗ ಒಂದೇ ವಿಚಾರವನ್ನು ಪದೇ ಪದೇ ಹೇಳಬೇಡಿ; ಸಭೆ ನಡೆಯೋಕೆ ಬಿಡಿ ಎಂದು ಸದಸ್ಯೆ ಶ್ವೇತಾ ಹೇಳಿದರು. ಅಧ್ಯಕ್ಷರೇ ನೀವು ಸಭೆ ನಡೆಸ್ತಿರಾ ಅಥವಾ ನಾವು ಸಭೆಯನ್ನು ಬಹಿಷ್ಕಾರ ಮಾಡಬೇಕಾ ಎಂದು ಸದಸ್ಯ ಅಪ್ಪಣ್ಣ ಹೇಳಿದಾಗ ನೀವು ಇಲ್ಲಿದ್ದರೂ ಕೂಡ ಬಹಿಷ್ಕಾರ ಆದಂತೆಯೇ ಎಂದು ಅಮಿನ್ ಮೊಯ್ಸಿನ್ ಹೇಳಿದರು. ಪ್ರತಿ ಸಭೆಯಲ್ಲೂ ದೊಂಬರಾಟ ಮಾಡೋದೇ ನಿಮ್ಮ ಕೆಲಸ ಎಂದು ಅಪ್ಪಣ್ಣ ಕುಟುಕಿದರು.