ಮಡಿಕೇರಿ ಆ.೨೭ : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ರೂ.೭೫.೩೫ ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.೨೦ರಷ್ಟು ಡಿವಿಡೆಂಡ್ ನೀಡುವ ಪ್ರಸ್ತಾವನೆಯನ್ನು ವಾರ್ಷಿಕ ಮಹಾಸಭೆಯ ಅನುಮೋದನೆಗೆ ಮಂಡಿಸಲು ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೬ರ ಮಾರ್ಚ್ ೩೧ರ ಅಂತ್ಯಕ್ಕೆ ಸಂಘದಲ್ಲಿ ಒಟ್ಟು ೧,೨೦೩ ಎ ತರಗತಿಯ ಸದಸ್ಯರಿದ್ದು, ಸದಸ್ಯರಿಂದ ರೂ.೮೯.೨೬ ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಕ್ಷೇಮ ನಿಧಿ ಸೇರಿದಂತೆ ಇತರೆ ನಿಧಿಗಳಲ್ಲಿ ರೂ.೩.೯೫ ಕೋಟಿ ಹಾಗೂ ನಿರಖು ಠೇವಣಿ, ಸಂಚಯ ಠೇವಣಿ ಸೇರಿದಂತೆ ಒಟ್ಟು ರೂ.೨೨.೭೧ ಕೋಟಿ ಠೇವಣಿ ಸಂಗ್ರಹವಾಗಿದೆ ಎಂದರು.

ಸAಘದ ಬಂಡವಾಳದ ಪೈಕಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ, ನಿರಖು ಠೇವಣಿ ಹಾಗೂ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಾಲು ಮತ್ತು ಠೇವಣಿ ರೂಪದಲ್ಲಿ ಒಟ್ಟು ರೂ.೯.೬೪ ಕೋಟಿ ಹೂಡಿಕೆ ಮಾಡಲಾಗಿದೆ. ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ಕೆಸಿಸಿ ಹಾಗೂ ಫಸಲು ಸಾಲ ಸೇರಿದಂತೆ ೨೦೨೫-೨೬ನೇ ಸಾಲಿನಲ್ಲಿ ರೂ.೨೪.೦೬ ಕೋಟಿ ಸಾಲವನ್ನು ವಿತರಿಸಲಾಗಿದೆ. ರಸಗೊಬ್ಬರ ಸೇರಿದಂತೆ ಕೃಷಿ ಹಾಗೂ ಅಗತ್ಯ ವಸ್ತುಗಳ ಮಾರಾಟದಲ್ಲಿಯೂ ಸಂಘ ಉತ್ತಮ ವಹಿವಾಟು ನಡೆಸಿದೆ. ಎಂಸಿಎಫ್, ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್, ಫ್ಯಾಕ್ಟ್, ಜುವಾರಿ, ಕೋರಮಂಡಲ್, ಸ್ಪೆನ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ ರಸಗೊಬ್ಬರಗಳ ಸಗಟು ಮತ್ತು ಚಿಲ್ಲರೆ ಪರವಾನಗಿ ಹೊಂದಿರುವ ಸಂಘವು ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ.

೨೦೨೫-೨೬ನೇ ಸಾಲಿನಲ್ಲಿ ರಸಗೊಬ್ಬರ, ಕೃಷಿ ಉಪಕರಣಗಳು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಾಮಾಗ್ರಿಗಳ ಮಾರಾಟದಿಂದ ರೂ.೬.೭೨ ಕೋಟಿ ವಹಿವಾಟು ನಡೆಸಿ ರೂ.೨೬.೪೧ ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಸಂಘವು ವರ್ಷದಲ್ಲಿ ಒಟ್ಟು ರೂ.೧೭೧.೦೭ ಕೋಟಿ ವಹಿವಾಟು ನಡೆಸಿ. ವ್ಯಾಪಾರಾಭಿವೃದ್ಧಿ ಸಾಲ ರೂ.೨೦ ಲಕ್ಷ ಮತ್ತು ಜಾಮೀನು ಸಾಲ ರೂ.೫ ಲಕ್ಷ ನೀಡಲಾಗುತ್ತಿದೆ. ಸಂಘದ ಎಲ್ಲಾ ವ್ಯವಸ್ಥೆಗಳು ಗಣಕೀಕÀರಣಗೊಂಡಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಮಾಹಿತಿ ನೀಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ರೈತ ಸದಸ್ಯರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರವನ್ನು ಅಳವಡಿಸಲಾಗಿದೆ. ಸಂಘದ ಮುಖ್ಯ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ‘ಪುಣ್ಯಕೋಟಿ’ ಅತಿಥಿಗೃಹ ನಿರ್ಮಿಸಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರವನ್ನು ಬಾಡಿಗೆಗೆ ಪಡೆದು ಕಾರ್ಯನಿರ್ವಹಿಸಲಾಗುತ್ತಿದ್ದು, ಇ-ಸ್ಟಾö್ಯಂಪ್ ಸೌಲಭ್ಯವನ್ನೂ ಸದಸ್ಯರು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.

ಸಂಘವು ನೋಂದಣಿಯಾಗಿ ೫೦ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮುಂದಿನ ವರ್ಷ ಆಯೋಜಿಸಲು ನಿರ್ಧರಿಸÀಲಾಗಿದೆ ಎಂದರು.

ವಾರ್ಷಿಕ ಮಹಾಸಭೆ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೯ನೇ ವಾರ್ಷಿಕ ಮಹಾಸಭೆ ತಾ.೩೦ರಂದು ಶ್ರೀ ನರೇಂದ್ರ ಮೋದಿ ಭವನದಲ್ಲಿ ನಡೆಯಲಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಬಿ.ಎಂ.ಕಾಶಿ, ಪುತ್ತರೀರ ಸಿ.ನಂಜಪ್ಪ, ಅಕ್ಕಾರಿ ಆರ್.ದಯಾನಂದ, ಮರದಾಳು ಜಿ.ಚೇತನ್ ಹಾಗೂ ಮುಕ್ಕಾಟಿ ಎ.ಪಳಂಗಪ್ಪ ಉಪಸ್ಥಿತರಿದ್ದರು.