ಸೋಮವಾರಪೇಟೆ, ಆ. ೨೬: ಯುವ ಜನಾಂಗದಲ್ಲಿ ಗದ್ದೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ೭ ವರ್ಷಗಳಿಂದ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ನಾಟಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ಈ ಬಾರಿಯ ಕಾರ್ಯಕ್ರಮವನ್ನು ತಾ. ೨೮ ರಂದು ಹೆಬ್ಬಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದ್ದಾರೆ.

ಬೆಳಿಗ್ಗೆ ೯ ಗಂಟೆಗೆ ಹೆಬ್ಬಾಲೆ ಗ್ರಾಮದ ಆದರ್ಶ್ ಬಸವರಾಜು ಅವರ ಗದ್ದೆಯಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸದ ಯದುವೀರ್ ಒಡೆಯರ್, ಶಾಸಕ ಡಾ. ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ, ಪ್ರಮುಖರಾದ ಅರುಣ್ ಕೊತ್ನಳ್ಳಿ, ಎಡಿಕೇರಿ ಪ್ರಸನ್ನ, ನಾಪಂಡ ಮುತ್ತಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ನಾಟಿ ಕಾರ್ಯಕ್ರಮದ ನಂತರ ಜಿಲ್ಲಾ ಮಟ್ಟದ ಕೆಸರು ಗದ್ದೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ, ಕೆಸರುಗದ್ದೆಯಲ್ಲಿ ಓಟ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ ವಾಲಿಬಾಲ್, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ, ಸಾರ್ವಜನಿಕ ವಿಭಾಗದಲ್ಲಿ ಗದ್ದೆ ಓಟ ಆಯೋಜಿಸಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ತಂಡಗಳು ಆಗಮಿಸಲಿವೆ. ವಿಜೇತ ತಂಡಕ್ಕೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು ಎಂದು ತಿಳಿಸಿದ್ದಾರೆ.