ಮದೆ, ಆ. ೨೬: ಮಡಿಕೇರಿ - ಮಂಗಳೂರು ರಾಜ್ಯ ಹೆದ್ದಾರಿಯ ದೇವರಕೊಲ್ಲಿ ಸಮೀಪ ಅಬ್ಬಿಕೊಲ್ಲಿ ತಿರುವು ಬಳಿ ಲಾರಿಯೊಂದು ಟೆಂಪೋ ಟ್ರಾವೆಲರ್ ಮೇಲೆ ಮಗುಚಿ ಬಿದ್ದ ಪರಿಣಾಮ ಪ್ರಯಾಣಿಕರಿಗೆ ಗಾಯವಾದ ಘಟನೆ ಸಂಭವಿಸಿದೆ.
ಗುಜರಾತಿನ ಅಹಮದಾಬಾದ್ ನಿವಾಸಿಗಳು ಪ್ರವಾಸ ನಿಮಿತ್ತ ಆಗಮಿಸಿ ಮಡಿಕೇರಿಯಿಂದ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದು, ದೇವರಕೊಲ್ಲಿ ಜಲಪಾತದ ಬಳಿ ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಜಲಪಾತ ವೀಕ್ಷಣೆ ಮಾಡುತ್ತಿದ್ದರು. ಇದೇ ವೇಳೆ ಅದೇ ಮಾರ್ಗವಾಗಿ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಬಾರದೆ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಮಗುಚಿ ಬಿದ್ದಿದೆ. ಟಿಟಿ ವಾಹನದಲ್ಲಿ ಇದ್ದ ೯ ಮಂದಿ ಪೈಕಿ ಮೂವರು ಕೆಳಗಿಳಿದಿದ್ದರು. ಇದೇ ಸಂದರ್ಭದಲ್ಲಿ ಲಾರಿ ಬಂದು ಮಗುಚಿಕೊಂಡಿದೆ. ಅವಘಡದಿಂದ ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಆ್ಯಂಬ್ಯುಲೆನ್ಸ್ ವಾಹನಗಳ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಇಬ್ರಾಹಿಂ