ಸುಂಟಿಕೊಪ್ಪ, ಆ. ೨೫: ಪಟ್ಟಣದಲ್ಲಿ ಮಳೆಯ ಆರ್ಭಟದ ನಡುವೆಯೂ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮಳೆಯನ್ನೂ ಲೆಕ್ಕಿಸದೆ ಸಣ್ಣ ಮಕ್ಕಳು, ಯುವಕರು ಹಾಗೂ ಹಿರಿಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ದಫ್ ಬಾರಿಸುತ್ತಾ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದರು.

ಮಂಗಳವಾರ ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್ ಹಾಗೂ ಗದ್ದೆಹಳ್ಳದ ಜುಮ್ಮ ಮಸ್ಜಿದ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಮದರಸಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಸೀದಿಗಳ ಮೌಲವಿಗಳು ಧಾರ್ಮಿಕ ಪ್ರವಚನ ನೀಡಿದರು.

ಮಂಗಳವಾರ ಬೆಳಿಗ್ಗೆ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ನಡೆಯಿತು. ವಿಶೇಷ ಉಡುಗೆ ತೊಟ್ಟ ಮಕ್ಕಳು ಹಾಗೂ ಯುವಕರು ಹಾಡುಗಳೊಂದಿಗೆ ದಫ್ ಬಾರಿಸಿದರು. ಶಾಲಾ ಮಕ್ಕಳು ಚಪ್ಪಾಳೆ, ಹೂಗುಚ್ಚ ಹಾಗೂ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಧ್ವನಿವರ್ಧಕಗಳ ಮೂಲಕ ಮೊಹಮ್ಮದ್ ಪೈಗಂಬರ್ ಅವರ ಶಾಂತಿ, ಸೌಹಾರ್ದತೆ ಹಾಗೂ ಆದರ್ಶ ಗುಣಗಳ ಸಂದೇಶವನ್ನು ಸಾರಲಾಯಿತು. ವಾಹನಗಳನ್ನು ಕುತ್ತುಬಿನ್ನರ್ ಸೇರಿದಂತೆ ವಿವಿಧ ಅಲಂಕಾರಗಳಿAದ ಸಿಂಗರಿಸಿ ಮೆರವಣಿಗೆಯಲ್ಲಿ ಬಳಸಲಾಗಿತ್ತು.

ಸುಂಟಿಕೊಪ್ಪ ಮುಸ್ಲಿಂ ಜಮಾಅತ್‌ನ ನೌಷದ್ ಜುಹಾರಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್‌ನ ಮೌಲಾನಾ ಜುಬ್ಬೇರ್ ಅಜ್ಹರಿ, ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನ ಧಾರ್ಮಿಕ ಮೌಲವಿ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನ ಅಬ್ದುಲ್ ಅಜೀಜ್ ಸಖಾಫಿ ಸೇರಿದಂತೆ ಧಾರ್ಮಿಕ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ಹಾಗೂ ಆಶೀರ್ವಚನ ನೀಡಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಮಿಲಾದ್ ಅನ್ನು ಸಂಭ್ರಮದಿAದ ಆಚರಿಸಲಾಯಿತು.

ನಾಪೋಕ್ಲು, ಹಳೆ ತಾಲೂಕು, ಎಮ್ಮೆಮಾಡು, ಕೊಟ್ಟಮುಡಿ, ಹೊದವಾಡ, ಕಕ್ಕಬ್ಬೆ, ಕುಂಜಿಲ ಸೇರಿದಂತೆ ವಿವಿಧ ಜಮಾಅತ್‌ಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈದ್ ಮಿಲಾದನ್ನು ಆಚರಿಸಲಾಯಿತು. ನಾಪೋಕ್ಲು ಪಟ್ಟಣದಲ್ಲಿ ಹಾಗೂ ಹಳೆ ತಾಲೂಕಿನಲ್ಲಿ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಾಪೋಕ್ಲು ಪಟ್ಟಣದ ಮುಯ್ಯದೀನ್ ಜುಮ್ಮ ಮಸೀದಿ ಜಮಾಯತ್ ವತಿಯಿಂದ ಈದ್ ಮಿಲಾದ್‌ಅನ್ನು ಸಂಭ್ರಮದಿAದ ಆಚರಿಸಲಾಯಿತು ಈ ಸಂದರ್ಭ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಜಮಾಅತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್ ಹಾಗೂ ಆಡಳಿತ ಮಂಡಳಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನದಾನ ನೆರವೇರಿದವು. ವಿವಿಧೆಡೆ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಮೀಪದ ಎಮ್ಮೆಮಾಡು ಇಸ್ಲಾಂ ಮುಸ್ಲಿಂ ಜಮಾಅತ್ ವತಿಯಿಂದ ಈದ್ ಸಂದೇಶ ಜಾಥಾವನ್ನು ಆಯೋಜಿಸಲಾಗಿತ್ತು. ಕಡಂಗ, ಆ. ೨೫: ಪುಣ್ಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ಕಡಂಗ ಬದ್ರಿಯಾ ಜಮಾಅತ್ ವತಿಯಿಂದ ಈದ್‌ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮುದರ್ರಿಸ್ ಉಸ್ತಾದ್ ಸ್ವಾದಿಕ್ ಸುರೈಜಿ ಸಖಾಫಿ ಪ್ರಾರ್ಥನೆ ನೆರವೇರಿಸಿದರು.

ಬಳಿಕ ಕಡಂಗ ಪಟ್ಟಣದಿಂದ ಕೊಕ್ಕಂಡಬಾಣೆ ದರ್ಗಾದವರೆಗೆ ಜಾಥಾ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ಹಾಗೂ ಸ್ಕೌಟ್ ತಂಡದ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಸಂಜೆ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಡಿ.ಎಚ್. ಸೂಫಿ ಹಾಜಿ, ಬಟ್ಟಕಾಳಂಡ ರಾಜಾ ದಿನೇಶ್ ಹಾಗೂ ಮಂಡೆಟೀರ ಅನಿಲ್ ಪಾಲ್ಗೊಂಡು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮೀಲ್, ಹಂಝ, ಆಶ್ರಫ್ ಸಿ.ಎ., ರಶೀದ್ ಆಶ್ರಫಿ, ಮೊಯದ್ದಿನ್ ಕುಟ್ಟಿ, ಉಸ್ತಾದ್ ಹುಸೇನ್ ಸಹದಿ, ಹಂಶದ್ ಸಹದಿ ಸೇರಿದಂತೆ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು. ಜಮಾಅತ್ ಕಾರ್ಯದರ್ಶಿ ರಾಶಿದ್ ಯು.ಇ. ಸ್ವಾಗತಿಸಿದರು. ಕೂಡಿಗೆ: ಇಲ್ಲಿನ ಮುಹಿಯ್ಯದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.

ಧ್ವಜಾರೋಹಣವನ್ನು ಸಮಿತಿ ಅಧ್ಯಕ್ಷ ಅಜೀಜ್ ನೆರವೇರಿಸಿದರು. ಕೂಡಿಗೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿದ ಜಾಥಾದಲ್ಲಿ ವಿದ್ಯಾರ್ಥಿಗಳು ಆಕರ್ಷಕ ದಫ್ ಮತ್ತು ಸ್ಕೌಟ್ ನೋಡುಗರ ಗಮನ ಸೆಳೆಯಿತು. ಈ ಸಂದರ್ಭ ಮಸೀದಿ ಅಧ್ಯಕ್ಷ ಅಜೀಜ್, ಕಾರ್ಯದರ್ಶಿ ನೌಫಾಲ್ ಖಾದರ್, ಷಂಶುದ್ಧಿನ್, ಶರೀಫ್, ನಸೀರ್, ಜಾಕಿರ್, ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು. ಕಡಂಗ: ಇಲ್ಲಿನ ಮುಹ್‌ಯಿದ್ದೀನ್ ಜುಮಾ ಮಸೀದಿ ವತಿಯಿಂದ ಪೈಗಂಬರ್ ೧೫೦೧ನೇ ಜನ್ಮ ದಿನವನ್ನು ಆಚರಿಸಲಾಯಿತು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾದಿ ಮಹಾಲ್ ಸಭಾಂಗಣದಲ್ಲಿ ನಡೆಸಲಾಯಿತು.

ಪ್ರಾರ್ಥನೆಯನ್ನು ನಿಜಾಮಿ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ಲ ವಹಿಸಿದ್ದರು. ಸಂಸ್ಥೆ ಪ್ರಾಂಶುಪಾಲರಾದ ಶುಹೈಬ್ ಫೈಜಿ ಸ್ವಾಗತಿಸಿದರು.. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮತ್ತು ಪೂರ್ವ ವಿದ್ಯಾರ್ಥಿಗಳ ಭಕ್ತಿಗೀತೆಗಳು ದಫ್ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮಹಿಳೆಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಚೆಯ್ಯಂಡಾಣೆ: ಈದ್ ಮಿಲಾದ್ ಹಬ್ಬವನ್ನು ಗದ್ದೆಹಳ್ಳದ ನೂರ್ ಜುಮಾ ಮಸೀದಿಯಲ್ಲಿ ಆಚರಿಸಲಾಯಿತು.

ಗದ್ದೆಹಳ್ಳದಿಂದ ಆರಂಭಗೊAಡ ಜಾಥಾ ಸುಂಟಿಕೊಪ್ಪ ಪಟ್ಟಣದ ಮೂಲಕ ಸಾಗಿ ಎಸ್‌ಎಸ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಮುಕ್ತಾಯಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಇಬ್ರಾಹಿಂ ವಹಿಸಿದ್ದರು. ಖತೀಬ್ ಅಬ್ದುಲ್ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮಾಅತ್ ಕಾರ್ಯದರ್ಶಿ ಶರೀಫ್, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ರಶೀದ್, ಹಸೈನಾರ್ ಸಖಾಫಿ ಮಾತನಾಡಿದರು. ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. ಸಮದ್ ಸಖಾಫಿ ಸ್ವಾಗತಿಸಿ, ಸೂಫಿ ಮುಸ್ಲಿಯಾರ್ ವಂದಿಸಿದರು. ಕೂಡಿಗೆ, ಆ.೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮೆಕ್ಕೆಜೋಳದ ಜಮೀನುಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಷ್ಟಪಡಿಸಿವೆ.

ಬೆಂಡೆಬೆಟ್ಟದ ಕಡೆಯಿಂದ ಬಂದಿರುವ ಕಾಡಾನೆಗಳು ಹಾರಂಗಿ ನದಿಯನ್ನು ದಾಟಿ ಹುದುಗೂರು ಗ್ರಾಮ ಪ್ರವೇಶಿಸಿ, ಜಮೀನುಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ತುಳಿದು ಹಾಗೂ ತಿಂದು ಹಾನಿಗೊಳಿಸಿವೆ. ಗ್ರಾಮದ ಪೂವಯ್ಯ, ಮಹದೇವ ಹಾಗೂ ಅನುಸೂಯ ಅವರ ಜಮೀನುಗಳಿಗೆ ಕಾಡಾನೆಗಳು ದಾಳಿ ನಡೆಸಿ ಬೆಳೆ ನಷ್ಟಪಡಿಸಿವೆ. ವಿಷಯ ತಿಳಿದು ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಮಂಜೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.