ಪಟ್ಟಣದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಗೌರಿ ಗಣೇಶೋತ್ಸವ ವೇಳೆ ನಗರದ ಅಯ್ಯಪ್ಪ ಬೆಟ್ಟದಲ್ಲಿ ಪ್ರತಿಷ್ಠಾಪನೆ ಮಾಡುವ ಶ್ರೀ ವರದ ವಿನಾಯಕ ಸೇವಾ ಸಮಿತಿಯ ೧೮ನೇ ವರ್ಷದ ಶ್ರೀ ಗಣೇಶೋತ್ಸವವು ಈ ಬಾರಿ ಸಡಗರ ಮತ್ತು ಭವ್ಯತೆಯಿಂದ ನೆರವೇರಲು ಸರ್ವ ಸಿದ್ಧತೆಗಳು ನಡೆಯುತ್ತಿವೆ.
ಸರಳತೆ ಮತ್ತು ಒಗ್ಗಟ್ಟಿನ ಪರಂಪರೆಯಲ್ಲಿ ಕಳೆದ ೧೮ ವರ್ಷಗಳ ಸುದೀರ್ಘ ಪಯಣದಲ್ಲಿ ಸಮಿತಿಯು ತನ್ನ ಮೂಲ ಸಂಪ್ರದಾಯ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಬಂದಿದೆ.
ಪಕ್ಷಪಾತವಿಲ್ಲದ ನಾಯಕತ್ವದೊಂದಿಗೆ ಪ್ರತಿ ವರ್ಷವೂ ಸಮಿತಿಯ ಮೂಲ ಉದ್ದೇಶ ಹಾಗೂ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಆಸ್ಪದ ನೀಡದೆ, ಕೇವಲ ಶಿಷ್ಟಾಚಾರ ಹಾಗೂ ಸಮಾನ ಗೌರವ ದೊಂದಿಗೆ ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಾ ಬರಲಾಗಿದ್ದು ಅಧ್ಯಕ್ಷರು ಎಂದು ಯಾರನ್ನೂ ಆಯ್ಕೆ ಮಾಡದೆ ಎಲ್ಲರೂ ಒಂದುಗೂಡಿ ಸಮಿತಿ ಮುಂದುವರೆಯುತ್ತಿದೆ.
ಮದನ್ ಅವರ ನೇತೃತ್ವದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳು ಒಂದೇ ಕುಟುಂಬದAತೆ ಒಗ್ಗೂಡಿ, ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಮೂಲಕ ಯಾವುದೇ ಅಸಮಾಧಾನಗಳಿಗೆ ಅವಕಾಶವಿಲ್ಲದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಈ ಸಮಿತಿಯ ಹಿರಿಮೆಯಾಗಿದೆ.
ಮನೆ-ಮನಗಳ ಒಕ್ಕೂಟವಾಗಿ ಮೂರು ಪಟ್ಟು ಸದಸ್ಯರ ಬಲ ಹೆಚ್ಚಿದ್ದು, ಈ ಹಿಂದೆ ಕೇವಲ ೪೦ ರಿಂದ ೫೦ ಕುಟುಂಬಗಳು ಸೇರಿ ನಡೆಸಿಕೊಂಡು ಬರುತ್ತಿದ್ದ ಈ ಸಣ್ಣ ಸಮಿತಿಯು, ಇದೀಗ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಕಳೆದ ಬಾರಿಯ ಯಶಸ್ವಿ ಕಾರ್ಯಕ್ರಮಗಳನ್ನು ಕಂಡು ಹೊರಗಿನ ಅನೇಕರು ಸ್ವಯಂಪ್ರೇರಿತರಾಗಿ ಸಮಿತಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಳೆದ ವರ್ಷ ೪೦ ರಷ್ಟಿದ್ದ ಸದಸ್ಯರ ಸಂಖ್ಯೆ ಈ ಬಾರಿ ೧೦೦- ೧೫೦ ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಯುವಕರ ಸೃಜನಶೀಲತೆಯಿಂದ ಕಳೆದ ಬಾರಿಯ ಮಂಟಪದ ವಿನ್ಯಾಸ ಮತ್ತು ಅಲಂಕಾರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಬಾರಿಯೂ ಅದ್ದೂರಿಯಾಗಿ ಆಚರಿಸುವ ಉದ್ದೇಶದಿಂದ ಸಮಿತಿಯ ಯುವ ಪಡೆ ವಿಭಿನ್ನ ಹಾಗೂ ಸೃಜನಶೀಲ ಮಾದರಿಯ ಮಂಟಪ ಅಲಂಕಾರಕ್ಕೆ ಯೋಜನೆ ರೂಪಿಸುತ್ತಿದೆ.
ಆಕರ್ಷಕ ಕಲಾಕೃತಿಯೊಂದಿಗೆ ಸಾರ್ವಜನಿಕರ ಮತ್ತು ಭಕ್ತಾದಿಗಳ ಗಮನಸೆಳೆಯುವಂತೆ ಮತ್ತಷ್ಟು ಆಕರ್ಷಕವಾಗಿ ಮೂಡಿಬರಲಿರುವ ಈ ಬಾರಿಯ ಮಂಟಪದ ವಿನ್ಯಾಸವು ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ.
ಒಟ್ಟಾರೆಯಾಗಿ, ೧೦೦ಕ್ಕೂ ಹೆಚ್ಚು ಸದಸ್ಯರ ಅಭೂತಪೂರ್ವ ಬೆಂಬಲ ಹಾಗೂ ಯುವಕರ ಹೊಸ ಆಲೋಚನೆಗಳೊಂದಿಗೆ ಶ್ರೀ ವರದ ವಿನಾಯಕ ಸೇವಾ ಸಮಿತಿಯು ತನ್ನ ೧೮ನೇ ವರ್ಷದ ಗೌರಿ-ಗಣೇಶೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಲು ಸಜ್ಜಾಗಿದೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧