ಕೊಡ್ಲಿಪೇಟೆ, ಆ. ೨೪: ಇಲ್ಲಿನ ಕಾಮಧೇನು ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸ್ಥಳೀಯ ಚೌಡೇಶ್ವರಿ ಸಮುದಾಯ ಭವನದಲ್ಲಿ ಅಧ್ಯಕ್ಷ ಕೆ.ಕೆ. ರೇಣುಕಾ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೫.೦೧ ಲಕ್ಷ ಲಾಭಗಳಿಸಿದೆ. ಸಂಘದಲ್ಲಿ ಒಟ್ಟು ೫೦೦ ಸದಸ್ಯರಿದ್ದು, ಪ್ರಸಕ್ತ ಸಾಲಿನಲ್ಲಿ ೨೦ ಮಂದಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಸಂಘದ ಪಾಲು ಬಂಡವಾಳ ರೂ. ೧೩.೭೯ ಲಕ್ಷ, ಕ್ಷೇಮನಿಧಿ ರೂ. ೯.೩೬ ಲಕ್ಷದಷ್ಟಿದೆ ಎಂದು ತಿಳಿಸಿದರು.

ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘದಿAದ ಸಾಲ ಸೌಲಭ್ಯವನ್ನು ಒದಗಿಸಲಾಗಿದ್ದು, ೧೦೩ ಸದಸ್ಯರಿಗೆ ಒಟ್ಟು ರೂ. ೪೨.೮೧ ಲಕ್ಷ ಜಾಮೀನು ಸಾಲವನ್ನು ವಿತರಿಸಲಾಗಿದೆ. ಸದಸ್ಯರು ಸಂಘದ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಸಾಲದ ಕಂತು ಹಾಗೂ ಬಡ್ಡಿಯನ್ನು ನಿಗದಿತ ಅವಧಿಯಲ್ಲಿ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.

ಇದೇ ವೇಳೆ ಮುಂದಿನ ಸಾಲಿನ ಲೆಕ್ಕಪರಿಶೋಧಕರ ಆಯ್ಕೆ, ಆಯವ್ಯಯ ಮಂಜೂರು, ಅಂದಾಜು ಆದಾಯ - ವೆಚ್ಚ, ಸಂಘದ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಡಿ.ಪಿ. ಕೃಷ್ಣಮೂರ್ತಿ ವರದಿ ಮಂಡಿಸಿದರು.

ಸAಘದ ಉಪಾಧ್ಯಕ್ಷ ಕೆ.ಹೆಚ್. ಅಲ್ತಾಫ್ ಹುಸೇನ್, ನಿರ್ದೇಶಕರುಗಳಾದ ಹೆಚ್.ಎಂ. ದಿವಾಕರ್, ಎ.ಆರ್. ಚಂದ್ರಶೆಟ್ಟಿ, ಕೆ.ಎಸ್. ಸುದೀಂದ್ರ ಕುಮಾರ್, ಡಿ.ಹೆಚ್. ರಮೇಶ್, ಕೆ.ಜಿ. ಕುಮಾರಸ್ವಾಮಿ, ಎ.ಎಂ.ಕುಮಾರಸ್ವಾಮಿ, ಎಸ್.ಎಸ್. ರಮೇಶ್, ಬಿ.ಕೆ. ರಂಜಿತಾ, ಪಿಗ್ಮಿ ಸಂಗ್ರಾಹಕ ಕೆ.ಟಿ. ಅನಿಲ್ ಮತ್ತು ಕೆ.ಎಸ್. ಕೌಶಿಕ್, ಸದಸ್ಯರುಗಳು ಇದ್ದರು.