ಸುಂಟಿಕೊಪ್ಪ,ಆ.೨೪: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ “ನಾವು'' ಪ್ರತಿಷ್ಠಾನ ಸಂಸ್ಥೆ ಕೊಡಗು ಅವರ ಸಹಯೋಗದಲ್ಲಿ ಸುಂಟಿಕೊಪ್ಪ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಿದ್ದ ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶೇಖರ್ ಅವರು ಮಾತನಾಡಿ, ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಲು ವಿದ್ಯಾರ್ಥಿಗಳ ಜೀವನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು, ನಾಯಕತ್ವದ ಗುಣಗಳು ಬೆಳೆಸಲು, ಸಕ್ರೀಯ ನಾಗರಿಕರನ್ನಾಗಿ ರೂಪಿಸಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂದರು.

ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ್ ಮ್ಯಾಥ್ಯೂ ಮಾತನಾಡಿ, ಈ ತರಬೇತಿಯಲ್ಲಿ ಹೆಣ್ಣುಮಕ್ಕಳ ಋತು ಚಕ್ರದ ಬಗ್ಗೆ ಅರಿವು, ಆನ್‌ಲೈನ್ ಸುರಕ್ಷತೆ, ಹವಾಮಾನ ಬದಲಾವಣೆ, ಘನತ್ಯಾಜ್ಯ ನಿರ್ವಹಣೆ, ಮಕ್ಕಳ ಹಕ್ಕುಗಳು, ಲಿಂಗ ಸಮಾನತೆ, ವೈಯಕ್ತಿಕ ನೈತಿಕತೆ, ಸ್ಥಳೀಯ ಸರ್ಕಾರ, ಅನುಭೂತಿ ಮತ್ತು ಸಮಾನತೆ ಹಾಗೂ ಇತರ ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಯೋಜಕರಾದ ನೀತು, ಶಾಲೆಯ ಪ್ರಾಂಶುಪಾಲರಾದ ಷಡಕ್ಷರಿ, “ನಾವು'' ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ತರಬೇತುದಾರರಾದ ಅನಿತಾ ಮತ್ತು ಜಿಲ್ಲೆಯ ಎಲ್ಲಾ ಸಮಾಜ ಶಿಕ್ಷಕರು ಮತ್ತು ನಾವು ಸಂಸ್ಥೆಯ ಶಿಲ್ಪ, ಸುಬಾನ್ ಉಪಸ್ಥಿತರಿದ್ದರು.