ಸಿದ್ದಾಪುರ, ಆ. ೨೪: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮ ಮತ್ತು ಯಡೂರು ವ್ಯಾಪ್ತಿಯಲ್ಲಿ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಎರಡು ಸಲಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಸ್ಥಳಾಂತರ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ವಿಧಾನಸಭೆಯ ಅಧಿವೇಶನ ಸಂದರ್ಭ ಸದನದಲ್ಲಿ ಸರಕಾರದ ಗಮನಸೆಳೆದು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿಯನ್ನು ಪಡೆದುಕೊಳ್ಳಲಾಯಿತು.

ಇದೀಗ ಕಣ್ಣಂಗಾಲ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂರು ಆನೆಗಳ ಪೈಕಿ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಹಾಗೂ ಉಪಟಳ ನೀಡುತ್ತಿದ್ದ ಎರಡು ಸಲಗಗಳನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದ ಆನೆ ಕ್ರಾಲಿಗೆ ಸಾಗಿಸಿದ್ದಾರೆ. ಮತ್ತೊಂದು ಕಾಡಾನೆಯನ್ನು ಸದ್ಯದಲ್ಲಿಯೆ ಸೆರೆ ಹಿಡಿಯಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಕಾಡಾನೆಗಳು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ಎಚ್ಚರ ವಹಿಸಿಕೊಂಡು ಜಾಗೃತರಾಗಿರಬೇಕೆಂದು ಶಾಸಕರು ಮನವಿ ಮಾಡಿದರು.

- ವಾಸು