ಶ್ರೀಮಂಗಲ, ಆ.೨೪: ಪ್ರಸ್ತಾವಿತ ಕಸ್ತೂರಿರಂಗನ್ ವರದಿ ಅನುಷ್ಠಾನಗೊಂಡರೆ ಅದರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಜನರ ದೈನಂದಿನ ಜೀವನ ಹಾಗೂ ಕೃಷಿ ಚಟುವಟಿಕೆಗಳು ಅತಂತ್ರವಾಗಲಿವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಆಗ್ರಹಿಸಿ ಬಿರುನಾಣಿಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಯಿತು.
ಮರೆನಾಡು ನಾಗರಿಕ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಬಿರುನಾಣಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಕಸ್ತೂರಿರಂಗನ್ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಟ್ಟಣದ ಜಂಕ್ಷನ್‌ನಲ್ಲಿ ವರದಿ ರೂಪಿಸಿದ ಡಾ. ಕಸ್ತೂರಿರಂಗನ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ಮಾತನಾಡಿ, ಕಸ್ತೂರಿರಂಗನ್ ಯೋಜನೆಯ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚಾಗಿವೆ. ಆಣೆಕಟ್ಟು, ರಾಷ್ಟಿçÃಯ ಹೆದ್ದಾರಿ ಸೇರಿದಂತೆ ಬೃಹತ್ ಯೋಜನೆಗಳಿಗೂ ನಿರ್ಬಂಧ ಎದುರಾಗಲಿದ್ದು, ಕ್ರಮೇಣ ಈ ಪ್ರದೇಶದ ಜನರ ಅಸ್ತಿತ್ವವೇ ಕಳೆದುಹೋಗುವ ಆತಂಕವಿದೆ ಎಂದು ಹೇಳಿದರು.
ಅತಿ ಸೂಕ್ಷö್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ ಆತ್ಮರಕ್ಷಣೆಗಾಗಿ ಕೋವಿ ಬಳಕೆ ಹಾಗೂ ಹೊಂದಿರುವುದಕ್ಕೂ ತೊಂದರೆ ಎದುರಾಗಬಹುದು. ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕೋವಿ ಸಂಪ್ರದಾಯಕ್ಕೆ ಧಕ್ಕೆಯಾಗುವುದರಿಂದ ಸಂಸ್ಕೃತಿ ಹಾಗೂ ಹಬ್ಬಗಳ ಆಚರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಲಾಲಾ ಅಪ್ಪಣ್ಣ ಹೇಳಿದರು. ಕಸ್ತೂರಿರಂಗನ್ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಮಾತನಾಡಿ, ವರದಿ ಜಾರಿಯಾದರೆ ಈ ವ್ಯಾಪ್ತಿಯ ಜನರ ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಮಸ್ಯೆ ಎದುರಾಗಲಿದೆ. ಜನರ ದೈನಂದಿನ ಜೀವನಕ್ಕೂ ತೊಂದರೆಯಾಗಲಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬೊಟ್ಟಂಗಡ ಗಿರೀಶ್ ಮಾತನಾಡಿ, ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಮೂಲಕವೇ ಪರಿಸರ ಸಂರಕ್ಷಣೆ ಸಾಧ್ಯವಿದೆ. ಈ ವರದಿಯಿಂದ ಜನರು ತಮ್ಮ ನೆಲದಲ್ಲೇ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಲ್ಲಿಸುವ ಮನವಿ ಪತ್ರವನ್ನು ಬಿರುನಾಣಿ ಗ್ರಾಮ ಪಂಚಾಯಿತಿ ಪಿಡಿಓ ಪ್ರಕಾಶ್ ಅವರ ಮೂಲಕ ಸಲ್ಲಿಸಲಾಯಿತು. ಸದ್ಯದಲ್ಲೇ ಗ್ರಾಮಸಭೆ ಕರೆದು ಕಸ್ತೂರಿರಂಗನ್ ವರದಿಗೆ ವಿರೋಧ ವ್ಯಕ್ತಪಡಿಸುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಮರೆನಾಡು ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಾಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ, ನಿರ್ದೇಶಕರುಗಳಾದ ಕಾಳಿಮಾಡ ರಶಿಕ್ ಕಾವೇರಪ್ಪ, ಕುಪ್ಪಣಮಾಡ ಪ್ರೀತಮ್ ಬಲ್ಯಮೀದೇರಿರ ರಾಜ, ಗುಡ್ಡಮಾಡ ಸುಧೀರ್, ಅಣ್ಣಳಮಾಡ ಸನ್ನಿ, ಕಾಳಿಮಾಡ ಗಿರೀಶ್ ಮತ್ತು ಪ್ರಮುಖರಾದ ಕರ್ತಮಾಡ ಸುಜು, ಪ್ಯಾಕ್ಸ್ ಉಪಾಧ್ಯಕ್ಷ ಗುಡ್ಡಮಾಡ ಸುಬ್ರಮಣಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕೀಕಣಮಾಡ ಮನು, ಅಣ್ಣಳಮಾಡ ಗಿರೀಶ್, ಕೊಡಗು ರಕ್ಷಣಾ ವೇದಿಕೆ ಬಿರುನಾಣಿ ಅಧ್ಯಕ್ಷ ಕುಪ್ಪಣಮಾಡ ಗೌತಮ್, ಉಪಾಧ್ಯಕ್ಷ ಕಾಳಿಮಾಡ ಸಚಿನ್, ಅಣ್ಣೀರ ವಿಜು ಪೂಣಚ್ಚ, ಮೀದೇರಿರ ಸುರೇಶ್, ಚೋನಿರ ಸುಬ್ರಮಣಿ ಮುಂತಾದವರು ಪಾಲ್ಗೊಂಡಿದ್ದರು.