ವೀರಾಜಪೇಟೆ, ಆ. ೨೩: ಕೊಡಗಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಬೆಳೆ ಪರಿಹಾರಗಳನ್ನು ನೀಡದೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ಪ್ರಯೋಗ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕೊಡಗಿನ ಸ್ಥಳೀಯ ವಾತಾವರಣ, ಜಲಚಕ್ರ ಮತ್ತು ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಯಾವುದೇ ಅಧ್ಯಯನವಿಲ್ಲದೆ ಇಂತಹ ಪ್ರಯೋಗಗಳನ್ನು ಕೊಡಗಿನಲ್ಲಿ ನಡೆಸಬಾರದು. ವೈಜ್ಞಾನಿಕ ಅಧ್ಯಯನ ಅಗತ್ಯ ಎಂದು ತಿಳಿಸಿದ್ದಾರೆ.
ನಷ್ಟವನ್ನು ಸರ್ಕಾರ ಭರಿಸಬೇಕು
ಕೊಡಗಿನ ಸಂಕಷ್ಟವನ್ನು ಕೇಳಲು ಹಾಗೂ ಇದಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಮೋಡ ಬಿತ್ತನೆ ಕಾರ್ಯದಲ್ಲಿ ಕೊಡಗಿನಲ್ಲಿ ನಷ್ಟ ಅಥವಾ ಅಹಿತಕರ ಘಟನೆ ಸಂಭವಿಸಿದಲ್ಲಿ ರಾಜ್ಯ ಸರ್ಕಾರವೇ ಇದಕ್ಕೆ ನೇರ ಹೊಣೆ ಹೊರಬೇಕಾಗುತ್ತೆ ಎಂದು ಬಿಜೆಪಿ ವೀರಾಜಪೇಟೆ ಮಂಡಲ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಈ ಯೋಜನೆಯಿಂದ ಕೊಡಗು ಜಿಲ್ಲೆಗೆ ಹಾಗೂ ಕೊಡಗಿನ ಜನರಿಗೆ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ಕೊಡಗಿನಲ್ಲಿ ಮೋಡ ಬಿತ್ತನೆಯನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.