ಗೋಣಿಕೊಪ್ಪಲು, ಆ.೨೩: ವರಮಹಾಲಕ್ಷಿö್ಮ ಹಬ್ಬದ ವಿಶೇಷ ಆಫರ್ ಹಾಗೂ ಭರ್ಜರಿ ಬಹುಮಾನದ ಆಮಿಷವೊಡ್ಡಿ ವಂಚಿಸಿದ ಘಟನೆ ಗೋಣಿಕೊಪ್ಪಲಿನಲ್ಲಿ ಬೆಳಕಿಗೆ ಬಂದಿದೆ.
ಅಗರಬತ್ತಿ ಮಾರಾಟದ ನೆಪದಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ಯುವಕರು ಮಹಿಳೆಯೊಬ್ಬರನ್ನು ನಂಬಿಸಿ ೬ ಸಾವಿರ ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ಹೊರ ಜಿಲ್ಲೆಯಿಂದ ಓಮ್ನಿ ಕಾರಿನಲ್ಲಿ ಬಂದಿದ್ದ ಇಬ್ಬರು ಯುವಕರು ಪೊನ್ನಂಪೇಟೆ ರಸ್ತೆಯ ಸಮೀಪದ ಪೊನ್ನಮ್ಮ ಮುರುಗೇಶ್ ಅವರ ಮನೆಗೆ ತೆರಳಿ, ವರಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ಅಗರಬತ್ತಿ ಪ್ಯಾಕೆಟ್ ಖರೀದಿಸಿದರೆ ಭರ್ಜರಿ ಬಹುಮಾನದ ಕೂಪನ್ ದೊರೆಯಲಿದೆ ಎಂದು ನಂಬಿಸಿದ್ದಾರೆ. ಅಲ್ಲದೆ, ಈ ಆಫರ್ ಚಾನೆಲ್‌ಗಳಲ್ಲೂ ಪ್ರಸಾರವಾಗಲಿದೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾರೆ.
ಯುವಕರ ಮಾತನ್ನು ನಂಬಿದ ಪೊನ್ನಮ್ಮ ರೂ. ೨೦ ನೀಡಿ ಎರಡು ಅಗರಬತ್ತಿ ಪ್ಯಾಕೆಟ್‌ಗಳನ್ನು ಖರೀದಿಸಿದ್ದಾರೆ. ಬಳಿಕ ಪ್ಯಾಕೆಟ್‌ನಲ್ಲಿ ಬಹುಮಾನದ ಕೂಪನ್ ಬಂದಿರುವAತೆ ನಾಟಕವಾಡಿದ ವಂಚಕರು, ಕಳಪೆ ಗುಣಮಟ್ಟದ ಮಿಕ್ಸಿ, ಕುಕ್ಕರ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮಹಿಳೆಗೆ ನೀಡಿದ್ದಾರೆ.
ಇದಾದ ಬಳಿಕ ಇನ್ನೂ ದೊಡ್ಡ ಮೊತ್ತದ ಗ್ಯಾರಂಟಿ ಬಹುಮಾನಗಳು ದೊರೆಯಲಿದ್ದು, ಅದಕ್ಕಾಗಿ ಠೇವಣಿ ಹಣ ನೀಡಬೇಕು ಎಂದು ನಂಬಿಸಿ ಮಹಿಳೆಯ ಬಳಿಯಿದ್ದ ೬ ಸಾವಿರವನ್ನು ಪಡೆದುಕೊಂಡು ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ದಿನಗಳು ಕಳೆದರೂ ಯಾವುದೇ ಬಹುಮಾನ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊನ್ನಮ್ಮ, ಯುವಕರು ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ವಂಚನೆಗೊಳಗಾಗಿರುವುದು ಖಚಿತವಾದ ಬಳಿಕ ಪೊನ್ನಮ್ಮ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರು ಓಮ್ನಿ ಕಾರಿನಲ್ಲಿ ಮನೆಗೆ ಬಂದಿರುವ ದೃಶ್ಯ, ಮನೆಯ ವರೊಂದಿಗೆ ನಡೆಸಿದ ಸಂಭಾಷಣೆ ಹಾಗೂ ಇಬ್ಬರ ಚಹರೆಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಈ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ. ಆರೋಪಿಗಳನ್ನು ಪ್ರಜ್ವಲ್ ಮತ್ತು ಹರ್ಷ ಶಿಂಧೆ ಎಂದು ಗುರುತಿಸಲಾಗಿದ್ದು, ಘಟನೆ ಸಂಬAಧ ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
- ಹೆಚ್.ಕೆ. ಜಗದೀಶ್