ಮಡಿಕೇರಿ: ಸಿರಿವಂತನಾಗಬೇಕೆAಬ ಆತುರದಿಂದ ಅಡ್ಡದಾರಿಯಲ್ಲಿ ತಪ್ಪು ಯೋಚನೆಗಳನ್ನು ಎಂದಿಗೂ ಮಾಡಬೇಡಿ. ಶ್ರಮವಹಿಸಿ ದುಡಿದರಷ್ಟೇ ಜೀವನದಲ್ಲಿ ಸೂಕ್ತ ಪ್ರತಿಫಲ ಖಂಡಿತಾ ದೊರಕುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬ್ಲಾಸಂ ಶಾಲೆಯಲ್ಲಿ ಆಯೋಜಿಸಲ್ಪಟ್ಟಿದ್ದ ಹಿರಿಯ ಜೀವಗಳಿಗೆ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ರಮೇಶ್ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿಯೇ ಮಾತನಾಡುವ ಕಲೆಯನ್ನು ಸಿದ್ದಿಸಿಕೊಂಡರೆ ಸಮಾಜದಲ್ಲಿ ಮುಂದೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿದ ಟಿ.ಪಿ. ರಮೇಶ್, ಜೀವನ ಎಂಬುದು ಸದಾ ಸುಖದಿಂದ ಕೂಡಿರುವುದಿಲ್ಲ. ಹೀಗಾಗಿ ಮಕ್ಕಳು ಸಾಕಷ್ಟು ಕಷ್ಟ, ಸೋಲುಗಳ ಸವಾಲನ್ನೂ ಎದುರಿಸಲು ಮಾನಸಿಕವಾಗಿ ಸಿದ್ದರಾಗಿರಬೇಕು ಎಂದರು.
ಸನ್ಮಾನಿತರಾದ ತಳೂರು ಆನಂದ್ ಮಾತನಾಡಿ, ತಾವು ಸುಖದಲ್ಲಿ ಬೆಳೆಯಲು ಕಾರಣರಾದ ಪೋಷಕರಿಗೆ, ಶಿಕ್ಷಕರಿಗೆ ಮಕ್ಕಳು ಸದಾ ಕೃತಜ್ಞತೆ ತೋರಬೇಕೆಂದು ನುಡಿದರು.
ಸನ್ಮಾನಿತರಾದ ಅಂಬೆಕಲ್ ಸುಶೀಲಾ ಕುಶಾಲಪ್ಪ ಮಾತನಾಡಿ, ಹಿರಿಯರು ಅನಾರೋಗ್ಯದಿಂದ ಇದ್ದ ಸಂದರ್ಭ ಅವರನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡುವುದು ಯುವಪೀಳಿಗೆಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ನ ಹಿರಿಯ ಜೀವಗಳಿಗೆ ಗೌರವ ನಮನ ಕಾರ್ಯಕ್ರಮ ಸಂಚಾಲಕ ಅನಿಲ್ ಹೆಚ್.ಟಿ. ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜಿಲ್ಲೆಯಾದ್ಯಂತ ವಿಶ್ವಹಿರಿಯ ನಾಗರಿಕರ ದಿನದಂದು ೨೫ ಶಾಲೆಗಳಲ್ಲಿ ೮೫ ಹಿರಿಯ ನಾಗರಿಕರನ್ನು ಸನ್ಮಾನಿಸಲಾಗಿದೆ. ಮನೆ ಮತ್ತು ಸಮಾಜದಲ್ಲಿ ಹಿರಿಯರಿದ್ದರೆ ಅದು ಶೋಭೆ, ಶಾಂತಿಯುತ ಸಮಾಜ ಮತ್ತು ಮನೆಯ ವಾತಾವರಣಕ್ಕೆ ಹಿರಿಯರ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಬ್ಲಾಸಂ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಅಂಬೆಕಲ್ ವಿನೋದ್ ಕುಶಾಲಪ್ಪ ಸ್ವಾಗತಿಸಿ, ಪ್ರಕಾಶ್ ಪೂವಯ್ಯ ಹಾಗೂ ಶಿಕ್ಷಕಿ ಸಫಿದಾ ಸನ್ಮಾನಿತರನ್ನು ಪರಿಚಯಿಸಿದ ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲಾ ಶಿಕ್ಷಕಿ ಶೈಲಜ ವಂದಿಸಿದರು. ವಿದ್ಯಾರ್ಥಿಗಳಾದ ಪ್ರತಿಭಾ, ಅಜ್ಮಿಯ ಹಿರಿಯ ನಾಗರಿಕರ ಮಹತ್ವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸರ್ವೋದಯ ಸಮಿತಿ ಜಿಲ್ಲಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ರೋಟರಿ ಸದಸ್ಯೆ ಲೀನಾ ಪೂವಯ್ಯ ಹಾಜರಿದ್ದರು. ಸನ್ಮಾನಿತರನ್ನು ಶಾಲಾ ಬ್ಯಾಂಡ್ ವಾದನದ ಗೌರವದ ಮೂಲಕ ವೇದಿಕೆಗೆ ಕರೆತರಲಾಯಿತು.