ಸಿದ್ದಾಪುರ, ಆ. ೨೨: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಾ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಸಲಗವನ್ನು ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರದ ಕ್ರಾಲಿಗೆ ಸೇರಿಸಲಾಗಿದೆ.
ಕಣ್ಣಂಗಾಲ ಹಚ್ಚಿನಾಡು ಯಡೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಮಾನವನ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಸಲಗವನ್ನು ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಣ್ಣಂಗಾಲ ಗ್ರಾಮದ ಕಾಫಿ ತೋಟದೊಳಗೆ ಸೆರೆ ಹಿಡಿದಿದ್ದರು.
ಸಾಕಾನೆಗಳ ನೆರವಿನಿಂದ ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು. ನಂತರ ಲಾರಿಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿದ್ದು, ದುಬಾರೆಯ ಸಾಕಾನೆ ಶಿಬಿರದ ಕ್ರಾಲ್ನಲ್ಲಿ ಬಂಧಿಯಾಗಿದೆ.
ದುಬಾರೆ ಆನೆ ಶಿಬಿರದ ಕ್ರಾಲ್ನಲ್ಲಿ ಬಂಧಿಯಾಗಿರುವ ಎರಡು ಸಲಗಗಳಿಗೆ ಆಹಾರವಾಗಿ ಸೊಪ್ಪು ಮತ್ತು ಭತ್ತದ ಒಣಗಿದ ಹುಲ್ಲನ್ನು ನೀಡಲಾಗುತ್ತಿದೆ. ಸಲಗಗಳನ್ನು ಆರೈಕೆ ಮಾಡಲು ಮಾವುತರಾದ ಮರಿ ಹಾಗೂ ದಿನಗೂಲಿ ನೌಕರ ರಾಜಯ್ಯ ಮತ್ತು ಇನ್ನಿಬ್ಬರು ನಿಯೋಜನೆಗೊಂಡಿದ್ದಾರೆ.
ಇದೀಗ ಕಣ್ಣಂಗಾಲ ವ್ಯಾಪ್ತಿಯಲ್ಲಿ ಸೆರೆ ಹಿಡಿದ ಎರಡು ಸಲಗಗಳು ಅಲ್ಲದೆ ಹಾಸನ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸೆರೆ ಹಿಡಿದಿರುವ ಸಲಗ ಸೇರಿ ಮೂರು ಕಾಡಾನೆಗಳು ದುಬಾರೆ ಆನೆ ಶಿಬಿರದ ಕ್ರಾಲ್ನಲ್ಲಿ ಬಂಧಿಯಾಗಿವೆ.
-ವಾಸು