ಗೋಣಿಕೊಪ್ಪಲು ಆ.೨೨:: ಕಾಡಾನೆ ಧಾಳಿಗೆ ಶನಿವಾರ ಬೆಂಗಳೂರಿನಿAದ ಕೊಡಗು ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಹೋಂ ಸ್ಟೇಗೆ ಆಗಮಿಸಿದ್ದ ಬೆಂಗಳೂರು ಮೂಲದ ಪ್ರವಾಸಿಗನೇ ಈ ನತದೃಷ್ಟ ವ್ಯಕ್ತಿ.

ತೆರಾಲುವಿನ ಹೋಂಸ್ಟೇಯಲ್ಲಿ ತಂಗಿದ್ದ ಬೆಂಗಳೂರಿನ ಆರ್.ಆರ್. ನಗರ ನಿವಾಸಿ ಮುರಳೀಕೃಷ್ಣನ್ (೪೨) ಸಂಜೆ ಹೋಂಸ್ಟೇ ಸನಿಹ ವಾಯು ವಿಹಾರಕ್ಕೆಂದು ತೆರಳಿ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಆನೆಯೊಂದು ಎದುರಾಗಿ ಅವರ ಮೇಲೆ ದಾಳಿ ಮಾಡಿದ್ದು, ಆ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಬೆಂಗಳೂರಿನಿAದ ನಾಲ್ವರು ಸ್ನೇಹಿತರ ತಂಡ ಶನಿವಾರ ಮುಂಜಾನೆ ತೆರಾಲು ಸಮೀಪದ ಹೋಮ್ ಸ್ಟೇಗೆ ಆಗಮಿಸಿತ್ತು. ಈ ತಂಡದಲ್ಲಿದ್ದ ಮುರುಳಿ ಕೃಷ್ಣನ್ ಸಂಜೆಯ ವೇಳೆ ಹೋಮ್ ಸ್ಟೇಯ ಹೊರಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದರು. ಸಮೀಪದ ತೋಟದಿಂದ ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಕಾಡಾನೆ, ರಸ್ತೆಯಲ್ಲಿದ್ದ ಮುರುಳಿ ಕೃಷ್ಣನ್ ಅವರ ಮೇಲೆ ಏಕಾಏಕಿ ಧಾಳಿ ನಡೆಸಿದೆ. ಆನೆಯ ಧಾಳಿಯಿಂದ ಮುರುಳಿ ಕೃಷ್ಣನ್ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಎಚ್ಚೆತ್ತ ಹೋಮ್ ಸ್ಟೇ ಮಾಲೀಕರು ಗಾಯಾಳುವನ್ನು ತಮ್ಮ ಕಾರಿನಲ್ಲಿ ಶ್ರೀಮಂಗಲ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ವಿಷಯ ತಿಳಿಯುತ್ತಿದ್ದಂತೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿಗಳು, ಎಸಿಎಫ್ ಹಾಗೂ ಡಿಎಫ್‌ಓ ಸೇರಿದಂತೆ ಹಿರಿಯ ಅಧಿಕಾರಿಗಳು ಗೋಣಿಕೊಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಆನೆ ಧಾಳಿ ಮತ್ತು ಪ್ರವಾಸಿಗನ ಸಾವಿನ ಕುರಿತು ದೃಢಪಡಿಸಿದ ಕೊಡಗು ಅರಣ್ಯ ಸಿ.ಸಿ.ಎಫ್. ಸೋನಾಲ್ ವೃಷ್ಣಿ ಅವರು ವೀರಾಜಪೇಟೆ ಡಿಸಿಎಫ್ ಮತ್ತು ತಂಡ ಸ್ಥಳಕ್ಕೆ ತೆರಳಿರುವುದಾಗಿ ಹೇಳಿದರು. ಈ ಮಧ್ಯೆ ಅರಣ್ಯ ಇಲಾಖೆಯ ಜಾಗೃತಿ ತಂಡವು ತೆರಾಲುವಿನ ಈ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುತ್ತಿರುವ ಕುರಿತು ಈ ಹೋಂಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಿ ಜಾಗರೂಕರಾಗಿರಬೇಕು ಎಂದು ಸೂಚಿಸಿದ್ದುದಾಗಿ ಸೊನಾಲ್ ವೃಷ್ಣಿ “ಶಕ್ತಿ” ಗೆ ತಿಳಿಸಿದ್ದಾರೆ. ಮಧ್ಯಾಹ್ನ ೧೨.೩೦ ಕ್ಕೆ ಈ ಕುರಿತು ಎಚ್ಚರಿಕೆ ನೀಡಲಾಗಿತ್ತು ಎಂದು ಖಚಿತಪಡಿಸಿದ್ದಾರೆ. ಆದರೆ ಹೋಂಸ್ಟೇ ಮಾಲೀಕರು ಆ ಪ್ರದೇಶದಲ್ಲಿ ಆನೆಗಳ ಚಲನವಲನದ ಬಗ್ಗೆ ತಮ್ಮ ಹೋಂಸ್ಟೇಗೆ ಬಂದಿದ್ದ ಪ್ರವಾಸಿಗರ ಗಮನಕ್ಕೆ ತಂದಿರಲಿಲ್ಲ ಎಂಬುದು ಗೊತ್ತಾಗಿದೆ ಎಂದೂ ಅರಣ್ಯಾಧಿಕಾರಿ ಮಾಹಿತಿಯಿತ್ತಿದ್ದಾರೆ.

- ಹೆಚ್.ಕೆ. ಜಗದೀಶ್/ ಹರೀಶ್ ಮಾದಪ್ಪ