ಕಣಿವೆ, ಆ. ೨೨: ಕುಶಾಲನಗರ ಪಟ್ಟಣದಲ್ಲಿ ಜೀವನದಿ ಕಾವೇರಿ ಹರಿದಿರುವ ವ್ಯಾಪ್ತಿಯ ತಗ್ಗುಪ್ರದೇಶಗಳ ಮಂದಿಗೆ ಆಗಸ್ಟ್ ತಿಂಗಳು ಹಾಗೂ ಆಶ್ಲೇಷಾ ಮಳೆ ಇವೆರಡೂ ಕೂಡ ಒಮ್ಮಿಂದೊಮ್ಮೆ ಭಯಾನಕವಾದ ಚಳಿ ಹಾಗೂ ನಡುಕವನ್ನು ಭರಿಸುತ್ತದೆ.
ಏಕೆಂದರೆ ೨೦೧೭ ರ ಇಸವಿ. ಇದೇ ಆಗಸ್ಟ್ ತಿಂಗಳು. ದಿನಾಂಕ ೧೫, ೧೬, ೧೭ ಹಾಗೂ ೧೮ ಕುಶಾಲನಗರದ ನದಿಪಾತ್ರದ ನಿವಾಸಿಗಳು ಕಾವೇರಿ ನದಿಯ ಪ್ರವಾಹ ಉಂಟು ಮಾಡಿದ ತಲ್ಲಣಗಳಿಂದ ಇನ್ನೂ ಹೊರಬಂದಿಲ್ಲ.
ತಮ್ಮ ಅಮೂಲ್ಯವಾದ ಆಯಸ್ಸು, ವಯಸ್ಸು, ಆರೋಗ್ಯ ಎಲ್ಲವನ್ನು ಕಳೆದುಕೊಂಡು ಸಂಪಾದಿಸಿದ ಹಣವನ್ನು ಕಾವೇರಿ ನದಿಯ ತಗ್ಗು ಪ್ರದೇಶಗಳ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಮೊದಲಾದೆಡೆಗಳಲ್ಲಿ ನಿವೇಶನ ಖರೀದಿಸಿ ಕಟ್ಟಿಸಿ ವಾಸವಿದ್ದ ಅಂದ ಚೆಂದದ ಮನೆಗಳನ್ನೆಲ್ಲಾ ಕಾವೇರಿ ಪ್ರವಾಹ ಆಹುತಿಗೈದಿತ್ತು.
ಇದರಿಂದಾಗಿ ನಿವಾಸಿಗಳಿಗಾದ ನಷ್ಟ ಹೇಳತೀರದ್ದು. ಆದಾಗ್ಯೂ ಅಂದು ಅಧಿಕಾರದಲ್ಲಿದ್ದ ಮಾನವೀಯ ನೆಲೆಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರು ಜಲಪ್ರವಾಹದಿಂದ ನೀರು ತುಂಬಿದ ಮನೆಗಳಿಗೆ ತಲಾ ೫೦ ಸಾವಿರ ಪರಿಹಾರವನ್ನು ಕೊಟ್ಟಿದ್ದು ಈಗ ಇತಿಹಾಸ.
ಅಷ್ಟಕ್ಕೂ ೨೦೧೭ ರಲ್ಲಿ ಬಂದ ಪ್ರವಾಹ ಮುಂದಿನ ೨೦೧೮, ೨೦೧೯ ರಲ್ಲೂ ಮರುಕಳಿಸಿತ್ತು. ಅದೂ ಸ್ವಾತಂತ್ರ್ಯೋತ್ಸವ ಮಾಸದ ಇದೇ ಆಗಸ್ಟ್ನಲ್ಲಿ ಹಾಗೂ ಇದೇ ಆಶ್ಲೇಷಾ ಮಳೆಯಲ್ಲಿಯೇ.
೨೦೧೭ ರಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದು ಕಾವೇರಿ ಅಪಾಯದ ಮಟ್ಟ ಮೀರಿ ಹರಿಯಿತು. ಬಳಿಕ ೨೦೧೮ ರಲ್ಲಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಅತೀವ ಮಳೆ ಸುರಿದು ಬೆಟ್ಟ ಗುಡ್ಡ ಗಳು ಕುಸಿದು ಜಲಮಯವಾದ ಪರಿಣಾಮ ಹಾರಂಗಿ ನದಿ ಅಪಾಯದ ಮಟ್ಟ ಮೀರಿ ಹರಿದಿತ್ತು.
ಹೀಗೆ ಜಲಪ್ರವಾಹದಿಂದ ತತ್ತರಿಸಿದ ನದಿ ಪಾತ್ರದ ತಗ್ಗುಪ್ರದೇಶಗಳ ಮಂದಿ ತಮ್ಮ ಕನಸಿನ ಮಹಲುಗಳನ್ನು ತೊರೆದು ಎತ್ತರದ ಪ್ರದೇಶಗಳಲ್ಲಿ ಬದಲಿ ಮನೆಗಳನ್ನು ಕಟ್ಟಿಕೊಂಡರು.ಕೆಲವರು ಚಳಿಗಾಲ ಹಾಗೂ ಬೇಸಗೆಯ ಕಾಲಕ್ಕೆ ಇಲ್ಲಿನ ಮನೆಗಳನ್ನು ಬಳಸಿಕೊಂಡು ಮಳೆಗಾಲಕ್ಕೆ ಬದಲೀ ಮನೆಗಳ ಹುಡುಕಾಟದಲ್ಲಿ ತೊಡಗಿದ್ದರು.
ಇದೀಗ ೨೦೨೬ ಅದೇ ಆಗಸ್ಟ್ ತಿಂಗಳು. ಅದೇ ಆಶ್ಲೇಷಾ ಮಳೆ. ಹೇಳಿಕೊಳ್ಳುವಷ್ಟರ ಮಟ್ಟಿಗೆ ಮಳೆ ಸುರಿಸದ ಕಾರಣ ನದಿಯ ತಗ್ಗು ಪ್ರದೇಶಗಳ ಮಂದಿ ಒಂದಷ್ಟು ನಿರಾಳರಾಗಿದ್ದಾರೆ. ಆಗಸ್ಟ್ ೩ ರಿಂದ ೧೬ ರರವರೆಗೆ ಇದ್ದು, ಇದೀಗ ಆತಂಕ ದೂರಮಾಡಿದೆ. ಮಖಾ ನಕ್ಷತ್ರದ ಮಳೆ ಪ್ರಾರಂಭಗೊAಡಿದೆ.