ಮಡಿಕೇರಿ, ಆ. ೨೧: ಭಾಗಮಂಡಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ನ ಕಟ್ಟಡದ ಮುಂದುವರಿದ ಕಾಮಗಾರಿಗೆ ರೂ. ೨.೭೫ ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ಕೋರಿ ಟ್ರಸ್ಟ್ನ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ನೇತೃತ್ವದ ನಿಯೋಗ ಇತ್ತೀಚೆಗೆ ಭಾಗಮಂಡಲಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಕಟ್ಟಡ ನಿರ್ಮಾಣದ ಯೋಜನೆಯ ಕುರಿತು ಮಾಹಿತಿ ನೀಡಿತು.
ಭಾಗಮಂಡಲದಲ್ಲಿ ಅರ್ಧ ಎಕರೆ ಜಾಗದಲ್ಲಿ ಸರಕಾರ ನೀಡಿರುವ ರೂ. ೧ ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಮುಂದುವರಿದ ಕಾಮಗಾರಿಗೆ ರೂ. ೨.೭೫ ಲಕ್ಷ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಸರಕಾರ ಹಣ ಬಿಡುಗಡೆ ಮಾಡಬೇಕೆಂದು ಮುದ್ದಂಡ ಬಿ. ದೇವಯ್ಯ ಮನವಿ ಮಾಡಿದರು.
ಉಪಾಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಕೋಶಾಧಿಕಾರಿ ಮಂಡೇಡ ಕುಮಾರ್, ಟ್ರಸ್ಟಿಗಳಾದ ತೋಳಂಡ ಸೋಮಯ್ಯ, ಹಂಚೆಟ್ಟಿರ ಮನು ಮುದ್ದಪ್ಪ, ಪುತ್ತಮನೆ ಜೀವನ್, ಕುಕ್ಕೇರ ಶ್ಯಾಮಲಾ, ಪ್ರಭು, ಮುದ್ದಂಡ ರಾಯ್ ತಮ್ಮಯ್ಯ, ಮಂಗೇರಿರ ಸೋಮಯ್ಯ ಹಾಗೂ ಪಟ್ಟಮಾಡ ಮಿಲನ್ ನಿಯೋಗದಲ್ಲಿದ್ದರು.