ಮಡಿಕೇರಿ, ಆ.೨೧: ಪೊನ್ನಂಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರ್ತಿಕಾಡು ಎಂಬಲ್ಲಿ ಸರ್ಕಾರಿ ಪೈಸಾರಿಯಲ್ಲಿ ತಾತ್ಕಾಲಿಕ ಕುಡಿಸಲು ನಿರ್ಮಿಸಿಕೊಂಡು ಶಾಶ್ವತ ಸೂರಿಗಾಗಿ ಕಾಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಿವೇಶನ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ ಕೊರ್ತಿಕಾಡುವಿನಲ್ಲಿ ೬ ತಿಂಗಳುಗಳಿAದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ೨೦೦ ಕುಟುಂಬಗಳ ೬೦೦ಕ್ಕೂ ಹೆಚ್ಚು ಮಂದಿ ಮೂಲಭೂತ ಸೌಕರ್ಯಗಳಿಲ್ಲದೆ ಆಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಕಷ್ಟ ಸುಖ ವಿಚಾರಿಸದೆ, ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ. ಇದು ಸರ್ಕಾರಿ ಅಧಿಕಾರಿಗಳು ಸಂವಿಧಾನಕ್ಕೆ ತೋರಿಸುವ ಅಗೌರವವಾಗಿದೆ. ಇಂತಹ ಸರ್ಕಾರಿ ಅಧಿಕಾರಿಗಳ ಮೇಲೆ ಸುಮೋಟೋ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು ೩೫೦೦೦ ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಡ ಕೂಲಿ ಕಾರ್ಮಿಕರು ಲೈನ್ ಮನೆಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇವರಿಗೆ ಯಾವುದೇ ಆಸ್ತಿಪಾಸ್ತಿಗಳಾಗಲೀ ಸ್ವಂತ ಮನೆಯಾಗಲೀ ಇರುವುದಿಲ್ಲ. ಕಳೆದ ೩೦-೩೫ ವರ್ಷಗಳಿಂದ ಯಾವುದೇ ಸರ್ಕಾರಗಳು ಮನೆ ನಿವೇಶಗಳನ್ನು ಬಡವರಿಗೆ ಹಂಚಿರುವುದಿಲ್ಲ. ಇವರ ಬದುಕಿಗೆ ಇವರ ಮಕ್ಕಳ ಭವಿಷ್ಯಕ್ಕೆ ಯಾವುದೇ ಭದ್ರತೆ ಇರುವುದಿಲ್ಲ, ಸ್ವಾತಂತ್ರ‍್ಯ ಬಂದು ೮೦ ವರ್ಷಗಳಾದರೂ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬದುಕು ಶೋಚನೀಯ ಸ್ಥಿತಿಯಲ್ಲೇ ಮುಂದುವರೆಯುತ್ತಿದೆ ಎಂದು ಹೇಳಿದರು.

ರಾಜ್ಯದ ಉಪಮುಖ್ಯ ಮಂತ್ರಿಗಳಾದ ಜಿ.ಪರಮೇಶ್ವರ್ ಅವರು ಇತ್ತೀಚೆಗೆ ರಾಜ್ಯದ ನಿವೇಶನ ರಹಿತ ಕುಟುಂಬಗಳಿಗೆ ಪ್ರತಿ ಜಿಲ್ಲೆಗೆ ೫೦೦೦೦ ನಿವೇಶನಗಳನ್ನು ಸರ್ಕಾರಿ ಪ್ರಸಾರಿ ಜಾಗ ಗುರುತಿಸಿ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ಈ ಆದೇಶವು ಕಾಗದದಲ್ಲೇ ಆದೇಶವಾಗಿ ಉಳಿಯಬಾರದು, ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.

ವೀರಾಜಪೇಟೆ ವಿಧಾನಸಭಾ ಶಾಸಕರು ಈಗಾಗಲೇ ಎರಡು ಮೂರು ಬಾರಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸರ್ಕಾರಿ ಪೈಸಾರಿ ಜಾಗಗಳನ್ನು ಗುರುತಿಸಿ ಎರಡರಿಂದ ಮೂರು ಸಾವಿರ ನಿವೇಶನ ರಹಿತ ಕುಟುಂಬಗಳಿಗೆ ಜಾಗಗಳ ಗುರುತಿಸಿ ಹಕ್ಕುಪತ್ರ ಕೊಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಮುಂದಿನ ಚುನಾವಣೆಗೆ ಕೇವಲ ಒಂದೂವರೇ ವರ್ಷಗಳು ಮಾತ್ರ ಬಾಕಿ ಉಳಿದಿದ್ದು, ಶಾಸಕರು ಇತ್ತ ಗಮನಹರಿಸಿ ಈ ನಿವೇಶನ ರಹಿತ ಬಡಕುಟುಂಬಗಳಗೆ ನಿವೇಶನ ಕೊಡಿಸಿ ಹಕ್ಕುಪತ್ರ ಕೊಡಿಸುತ್ತಾರೆಂಬ ವಿಶ್ವಾಸ ನಮಗಿದೆ. ಜಿಲ್ಲಾಧಿಕಾರಿಗಳು, ಸಂಬAಧಪಟ್ಟ ಅಧಿಕಾರಿಗಳು ಪೊನ್ನಂಪೇಟೆ ತಾಲೂಕಿನ ಜನರಿಗೆ ಮೊದಲ ಆದ್ಯತೆ ಜಾಗದ ಅಳತೆ ಮಾಡಿಸಿ ಜಾಗ, ಮೂಲ ಸೌಕರ್ಯ ಒದಗಿಸಿ ಹಕ್ಕುಪತ್ರ ವಿತರಣೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಾಗೂ ಧರಣಿ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲೂಕು ಸಂಚಾಲಕ ಜೆ. ಹರೀಶ್, ಮಹಿಳಾ ಸಂಚಾಲಕಿ ಜೆ.ಎ.ಲಕ್ಷಿö್ಮ, ಸಂಘಟನಾ ಸಂಚಾಲಕಿ ಜೆ.ಆರ್. ಗೀತಾ, ಸಂಘಟನಾ ಸಂಚಾಲಕರುಗಳಾದ ಪಿ.ಕುಳಿಯ, ಸಿಂಗ ಉಪಸ್ಥಿತರಿದ್ದರು.