ಕುಶಾಲನಗರ: ೮೦ನೇ ಸ್ವಾತಂತ್ರ‍್ಯೋತ್ಸವ ಅಂಗವಾಗಿ ಕುಶಾಲನಗರದ ರಸೂಲ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಮೂಲಕ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಬಡಾವಣೆ ನಾಗರಿಕ ನಿವಾಸಿಗಳು ಸಂಭ್ರಮಿಸಿದ ಅಪರೂಪದ ಕಾರ್ಯಕ್ರಮ ನಡೆಯಿತು.

ಪುರಸಭೆಯ ಪೌರಕಾರ್ಮಿಕರಾದ ವೆಂಕಟೇಶ, ಬಸವರಾಜು ರಾಜೇಂದ್ರ ಅವರ ಮೂಲಕ ಧ್ವಜಾರೋಹಣ ನೆರವೇರಿಸಿ ನಂತರ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಎಂ.ಎನ್ ಈ ಸಂದರ್ಭ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಪಾತ್ರ ವಹಿಸಬೇಕು. ಭಾರತದ ಸ್ವಾತಂತ್ರ‍್ಯಕ್ಕಾಗಿ ಅನೇಕ ನಾಯಕರು ಮಾಡಿದ ತ್ಯಾಗವನ್ನು ದಿನನಿತ್ಯ ಸ್ಮರಿಸಬೇಕಾಗಿದೆ ಎಂದರು. ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ನಗರದ ಸ್ವಚ್ಛ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಶ್ರಮ ಅಪಾರ ಎಂದರು.

ದೇಶದ ಆಂತರಿಕ ಗೊಂದಲವನ್ನು ನಿವಾರಿಸಿ ಅಭಿವೃದ್ಧಿಯತ್ತ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.

ಇದೇ ಸಂದರ್ಭ ಬಡಾವಣೆಯ ನಾಗರಿಕರ ವತಿಯಿಂದ ವಾಟರ್‌ಮ್ಯಾನ್ ಭರತ್, ಕೆಇಬಿ ನೌಕರ ವಾಸಿಂ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಡಾವಣೆಯ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಆದಾ ರಿಜ ಅವರನ್ನು ಬಡಾವಣೆಯ ಪ್ರಮುಖರಾದ ಅಮ್ಜದ್ ಹುಸೇನ್, ರಿದಾ ಹುಸೇನ್ ದಂಪತಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಮಕ್ಕಳು ದೇಶಭಕ್ತಿ ಗೀತೆ ಹಾಡಿದರು.

ಈ ಸಂದರ್ಭ ಪುರಸಭೆ ಮಾಜಿ ಸದಸ್ಯ ಶೇಖ್ ಕಲೀಮುಲ್ಲಾ, ಅಜ್ಮಲ್, ಬಡಾವಣೆಯ ನಿವಾಸಿಗಳು ಹಾಗೂ ಮಕ್ಕಳು ಇದ್ದರು.