ಮಡಿಕೇರಿ, ಆ. ೨೧: ಪ್ರಸ್ತುತದ ಆಧುನಿಕ ಪ್ರಪಂಚ ಸಾಗುತ್ತಿರುವ ರೀತಿ, ಐಟಿ - ಬಿಟಿಯಂತಹ ಭರಾಟೆಯ ನಡುವೆ ಸಾಂಪ್ರದಾಯಿಕವಾದ ಕೃಷಿ ಮರೆಯಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಒಂದೊಮ್ಮೆ ಭತ್ತದ ಕೃಷಿಯೇ ಕೊಡಗಿನ ಜೀವನಾಡಿಯಾಗಿತ್ತು. ಆದರೆ ಕಾರಣಾಂತರಗಳಿAದ ಕೃಷಿ ಮರೆಯಾಗುತ್ತಾ ಬರುತ್ತಿದೆ.

ಈ ನಡುವೆ ಸಾಂಪ್ರದಾಯಿಕವಾದ ಭತ್ತದ ಕೃಷಿಯನ್ನು ಉತ್ತೇಜಿಸುವ, ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಪ್ರಯತ್ನಗಳೂ ಒಂದೆಡೆ ಕಂಡುಬರುತ್ತಿರುವುದು ಆಶಾದಾಯಕ ಬೆಳವೆಣಿಗೆಯೂ ಆಗಿದೆ. ಕೆಲವಾರು ಉತ್ಸಾಹಿ ರೈತರು ಸೇರಿದಂತೆ, ಸಂಘ - ಸಂಸ್ಥೆಗಳ ಮೂಲಕ ಈ ಉತ್ತೇಜನಕಾರಿ ವಿಚಾರ ಇದೀಗ ಜಿಲ್ಲೆಯ ಹಲವೆಡೆಗಳಲ್ಲಿ ಕಂಡುಬರುತ್ತಿದೆ. ಸಾಮೂಹಿಕವಾದ ತೊಡಗಿಸಿಕೊಳ್ಳುವಿಕೆ ಒಂದು ರೀತಿಯಲ್ಲಿ ಎಲ್ಲರನ್ನೂ ಪ್ರೇರೇಪಿಸುತ್ತದೆ. ಹಲವು ಸಂಘ ಸಂಸ್ಥೆಗಳ ಪ್ರಯತ್ನ ಈ ಕಾರಣದಿಂದಾಗಿ ಯಶಸ್ಸು ಕಾಣುತ್ತಿದೆ.

ಅದರಲ್ಲೂ ಯುವತಿಯರು, ಮಹಿಳೆಯರು, ಆಧುನಿಕತೆಯ ಬಿಸಿಯಲ್ಲಿ ಒಂದಷ್ಟು ಮುಂದೆ ಕಂಡುಬರುತ್ತಾರೆ. ಇಂತಹವರು ಕೆಸರು ಗೆದ್ದೆಗಿಳಿಯುವುದು ಅಪರೂಪ ಕೂಡ. ಆದರೆ ಇಲ್ಲಿ ಕೆಲವು ಮಹಿಳೆಯರು ಇದಕ್ಕೆ ಹೊರತಾಗಿದ್ದಾರೆ. ವರ್ಷಂಪ್ರತಿ ಸಂಘವೊAದರ ಮೂಲಕ ಸಾಮೂಹಿಕವಾಗಿ ನಾಟಿಕೆಲಸದಲ್ಲಿ ತೊಡಗಿಸಿಕೊಂಡು ತಾವೂ ಕೃಷಿಯ ಸುಂದರ ಅನುಭವದೊಂದಿಗೆ, ಇತರರನ್ನು ಪ್ರೇರೇಪಿಸಿಕೊಂಡು ಬರುತ್ತಿದ್ದಾರೆ.

ಜಿಲ್ಲೆಯ ಹಲವೆಡೆಯ ಮಹಿಳೆಯರನ್ನು ಒಳಗೊಂಡAತೆ ರಚಿಸಲಾಗಿರುವ ಬಾಂಡಿAಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್ ಎಂಬ ಹೆಸರಿನ ಸಂಘಟನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೃಷಿ ಮೂಲಕ ಜಲಮೂಲಗಳ ಸಮತೋಲನ ಕಾಪಾಡುವ, ಪರಿಸರ ಕಾಳಜಿ ಈ ಸಂಘಟನೆಯ ಚಿಂತನೆಯಾಗಿದೆ.

ಈ ನಿಟ್ಟಿನಲ್ಲಿ ಗದ್ದೆಕೆಲಸಕ್ಕೆ ವರ್ಷಂಪ್ರತಿ ಉತ್ಸುಕತೆ ತೋರುತ್ತಿರುವುದು ಇದರ ವಿಶೇಷತೆಯಾಗಿದೆ. ಒಂದೊAದು ವರ್ಷ ಸಂಘಟನೆಯ ಒಬ್ಬೊಬ್ಬ ಸದಸ್ಯೆಗೆ ಸೇರಿದ ಗದ್ದೆಯಲ್ಲಿ ಈ ತಂಡದವರು, ಇತರ ಆಸ್ತಕರನ್ನೂ ಸೇರಿಸಿಕೊಂಡು ಸಂಭ್ರಮ - ಸಡಗರದ ನಡುವೆ, ಹಾಡು, ನೃತ್ಯದಂತಹ ಮನರಂಜನೆಯ ನಡುವೆ ನಾಟಿ ಕೆಲಸ ಪೂರ್ಣಗೊಳಿಸಿ ಕೊಂಡುಬರುತ್ತಿದ್ದಾರೆ.

ಇದು ನಾಲ್ಕನೆಯ ವರ್ಷ

ಈ ಬಾರಿ ಶ್ರೀಮಂಗಲ ಬೀರುಗದ ಅಜ್ಜಮಾಡ ಪ್ರೇಮ ಬೋಪಣ್ಣ ಅವರ ಗದ್ದೆಯಲ್ಲಿ ತಂಡದ ಸದಸ್ಯೆಯರು ನಾಟಿ ಕೆಲಸ ನಡೆಸಿದರು. ಆರಂಭದಲ್ಲಿ ಟಿ. ಶೆಟ್ಟಿಗೇರಿಯ ತಡಿಯಂಗಡ ಸಬಿತ ಅವರಿಗೆ ಸೇರಿದ ಗದ್ದೆ, ಎರಡನೆಯ ವರ್ಷ ಬಾಳಲೆ ಬಿಳೂರಿನ ಆದೇಂಗಡ ತನ್ಜು ಅವರ ಗದ್ದೆ, ಕಳೆದ ವರ್ಷದ ಕುಂದದ ಕೊಡಂದೆರ ಅಂಜನ ಅವರ ಗದ್ದೆಯಲ್ಲಿ ನಾಟಿ ಕೆಲಸ ನಡೆಸಲಾಗಿತ್ತು. ಈ ಬಾರಿ ಕಳೆದೆರಡು ದಿನದ ಹಿಂದೆ ಬೀರುಗದ ಅಜ್ಜಮಾಡ ಪ್ರೇಮ ಅವರ ಗದ್ದೆಯಲ್ಲಿ ಸುಮಾರು ೪೦ ರಷ್ಟು ಮಹಿಳೆಯರು ಸಂಭ್ರಮ ಸಡಗರದೊಂದಿಗೆ ಎರಡು ಎಕರೆಯಷ್ಟು ಪ್ರದೇಶದಲ್ಲಿ ನಾಟಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

ಗದ್ದೆಯನ್ನು ಹಸನುಗೊಳಿಸುವುದು ಗದ್ದೆ ಮಾಲೀಕರ ಕೆಲಸವಾದರೆ, ನಾಟಿ ಕೆಲಸ ಇತರ ಸದಸ್ಯೆಯರ ತೊಡಗಿಸಿಕೊಳ್ಳುವಿಕೆ ಮೂಲಕ ನಡೆಯುತ್ತದೆ. ಈ ಕೆಲಸ - ಕಾರ್ಯವನ್ನು ಗಮನಿಸಿ ಸುತ್ತ-ಮುತ್ತಲಿನವರು ಪಾಳುಬಿಟ್ಟಿದ್ದ ಗದ್ದೆಯನ್ನು ಮತ್ತೆ ಕೃಷಿಗೆ ಪರಿವರ್ತನೆ ಮಾಡಲು ಮುಂದಾಗುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎನ್ನುತ್ತಾರೆ.

ಬಾಂಡಿAಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್ ಸಂಘಟನೆಯ ಪ್ರಮುಖರು ಮುಂದಿನ ವರ್ಷ ಪಾಳುಬಿದ್ದಿರುವ ಗದ್ದೆಯನ್ನು ಆಯಾ ಮಾಲೀಕರ ಮೂಲಕ ಮತ್ತೆ ಕೃಷಿಗೆ ಪರಿವರ್ತಿಸಿ ಅಲ್ಲಿ ಈ ನಾಟಿ ಸಂಭ್ರಮ ಹಮ್ಮಿಕೊಳ್ಳುವ ಉದ್ದೇಶವಿರುವುದಾಗಿ ಅವರು ತಿಳಿಸಿದ್ದಾರೆ. ಕನೆಕ್ಟಿಂಗ್ ಕೊಡವಾಸ್ ಸಂಘಟನೆ ನಡೆಸುತ್ತಿರುವ ನಾಟಿಪಣಿ ಕಾರ್ಯದಲ್ಲೂ ಕಳೆದ ವರ್ಷ ಸಂಘಟನೆಯ ಮಹಿಳೆಯರು ತೊಡಗಿಸಿಕೊಂಡಿದ್ದರು.

ಈ ಬಾರಿ ನಡೆದ ಕಾರ್ಯದಲ್ಲಿ ಬಾಂಡಿAಗ್ ಬ್ಲೂಮ್ಸ್ನ ಲಿಜೆಟ್ ಬಾಚಮಾಡ, ಆದೇಂಗಡ ತನುಜ, ಕೊಂಗಾAಡ ನಳಿನ, ತಡಿಯಂಗಡ ಸೌಮ್ಯ, ಅಜ್ಜಮಾಡ ಪ್ರಮೀಳಾ, ಅಜ್ಜಮಾಡ ಸಾವಿತ್ರಿ, ಚೊಟ್ಟೆಯಂಡಮಾಡ ಜಯಶ್ರೀ, ಬೊಳ್ಳಜಿರ ಸುಶೀಲ, ಬಾಚಮಾಡ ನವಿತ ಮತ್ತಿತರರು ತೊಡಗಿಸಿಕೊಂಡಿದ್ದರು. - ಶಶಿ ಸೋಮಯ್ಯ