ಮಡಿಕೇರಿ ಆ.೨೧ : ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಶಾಂತಿನಿಕೇತನ ಬಡಾವಣೆಯಲ್ಲಿ ೪೮ನೇ ವರ್ಷದ ಅದ್ಧೂರಿ ಗಣೇಶೋತ್ಸವವನ್ನು ಸೆಪ್ಟೆಂಬರ್ ೧೪ರಿಂದ ೨೬ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಸೆಪ್ಟೆಂಬರ್ ೧೪ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಗಣಪತಿ ಹೋಮದೊಂದಿಗೆ ಶ್ರೀ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಹಾಪೂಜೆ ನಡೆಯಲಿದೆ. ಬಳಿಕ ೧೩ ದಿನಗಳ ಕಾಲ ಪ್ರತಿದಿನ ಸಂಜೆ ಭಜನೆ ಮತ್ತು ಮಹಾಪೂಜೆ ನಡೆಯಲಿದೆ.
ಸೆಪ್ಟೆಂಬರ್ ೨೩ರಂದು ಸಂಜೆ ೭ ಗಂಟೆಗೆ ಸಾಮೂಹಿಕ ರಂಗಪೂಜೆ ಏರ್ಪಡಿಸಲಾಗಿದೆ. ಸೆಪ್ಟೆಂಬರ್ ೨೬ರಂದು ಮಹಾಪೂಜೆಯ ನಂತರ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಕಥಾ ಸಾರಾಂಶವುಳ್ಳ ಅಲಂಕೃತ ಮಂಟಪದಲ್ಲಿ ಅದ್ಧೂರಿ ಶೋಭಾಯಾತ್ರೆಯ ಮೂಲಕ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುವುದು. ಸೆಪ್ಟೆಂಬರ್ ೨೦ರಂದು ಸಾರ್ವಜನಿಕರಿಗೆ ಕ್ರೀಡಾಕೂಟವನ್ನು ಕೂಡ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.