ಚೆಟ್ಟಳ್ಳಿ, ಆ. ೨೧: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಚೆಟ್ಟಳ್ಳಿ ನಿವಾಸಿ ವಿನಿತಾ ಕುಮಾರಿ (೨೭) ಮೃತ ದುರ್ಧೈವಿ. ಇವರು ಮಹೇಶ್ ಎಂಬವರನ್ನು ಪ್ರೀತಿಸಿ ಸುಮಾರು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿ ಚೆಟ್ಟಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿ ಅನ್ಯೋನ್ಯವಾಗಿದ್ದು, ಯಾವುದೇ ತಕರಾರು ಇರಲಿಲ್ಲ. ಆದರೆ ಇತ್ತೀಚೆಗೆ ಕುಟುಂಬದಲ್ಲಿ ಸತತ ಮೂರು ಸಾವುಗಳು ಸಂಭವಿಸಿದ್ದು, ಇದರಿಂದ ವಿನಿತಾ ಕುಮಾರಿ ಮಾನಸಿಕವಾಗಿ ಬೇಸರಗೊಂಡಿದ್ದರು ಎಂದು ದೂರಿನಲ್ಲಿ ವಿನಿತಾ ಸಹೋದರ ವಿನೋದ್ ತಿಳಿಸಿದ್ದಾರೆ.
ತಾ. ೧೫ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವಿನಿತಾ ಕುಮಾರಿ ವಿಷ ಪದಾರ್ಥ ಸೇವಿಸಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾ. ೨೧ರಂದು ಮೃತಪಟ್ಟಿದ್ದಾರೆ.
ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.