ಮಡಿಕೇರಿ, ಆ. ೨೧: ಲ್ಯಾಂಪ್ಸ್ ಅಕಾಡೆಮಿ ತಿತಿಮತಿ ಶಾಲೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಸುಮನ್ ಮೂಡಗದ್ದೆ, ಅಕ್ಕ ಪಡೆಯ ಸಿಬ್ಬಂದಿಗಳು ಮತ್ತು ಮುಖ್ಯೋಪಾಧ್ಯಾಯರು ಬ್ಯಾಡ್ಜ್ ತೊಡಿಸಿ ಅಧಿಕಾರದ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಬಳಿಕ ವಿದ್ಯಾರ್ಥಿ ನಾಯಕರು ಪ್ರಮಾಣ ವಚನವನ್ನು ಸ್ವೀಕರಿಸಿದರು.

ಈ ಸಂದರ್ಭ ಸುಮನ್ ಮೂಡಗದ್ದೆ ಅವರು ನಾಯಕರಿಗೆ ಶಿಸ್ತು, ಸಮಯಪ್ರಜ್ಞೆ, ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಅಕ್ಕ ಪಡೆಯ ಸಿಬ್ಬಂದಿಗಳು ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಶಿಕ್ಷಣದ ಹಕ್ಕು ಹಾಗೂ ಮಹತ್ವ, ‘ಬೇಟಿ ಬಚಾವೋ - ಬೇಟಿ ಪಡಾವೋ’ ಇತ್ಯಾದಿ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತುರ್ತು ಸಂದರ್ಭದಲ್ಲಿ ಬಳಸಬೇಕಾದ ಸಹಾಯವಾಣಿ ಸಂಖ್ಯೆಗಳಾದ ೧೦೨, ೧೦೯೮ಗಳ ಬಗ್ಗೆ ಅರಿವು ಮೂಡಿಸಿದರು ಮತ್ತು ಆಯ್ಕೆಯಾದ ನಾಯಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಅಪೊಲೀನ್ ಡಿಸೋಜÁ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.