ಸೋಮವಾರಪೇಟೆ, ಆ. ೧೯: ಬದಲಾದ ಜೀವನ ಶೈಲಿಯಿಂದ ಹಾದಿತಪ್ಪುತ್ತಿರುವ ಯುವಜನಾಂಗಕ್ಕೆ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಹೇಳಿದರು. ತಥಾಸ್ತು ಸಾತ್ವಿಕ ಸಂಸ್ಥೆ ಹಾಗೂ ಅಬಕಾರಿ ಇಲಾಖೆ, ಅಬಕಾರಿ ನಿರೀಕ್ಷಕರು, ವಿಚಕ್ಷಣಾದಳ ಕುವೆಂಪುನಗರ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಯುವಜನಾಂಗದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಸರ್ಕಾರ ಹಾಗೂ ಇಲಾಖೆ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಫಲಪ್ರದವಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ಆಧುನಿಕ ಜೀವನ ಶೈಲಿಗೆ ಮಾರುಹೋಗಿ ಹಾದಿ ತಪ್ಪುತ್ತಿರುವವರನ್ನು ಸರಿದಾರಿಗೆ ತರುವ ಅನಿವಾರ್ಯತೆ ಇದೆ ಎಂದರು.
ರಕ್ತದಾನದಿAದ ಅಪಾಯದಲ್ಲಿರುವ ವ್ಯಕ್ತಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಆರೋಗ್ಯವಂತ ಜನರು ರಕ್ತದಾನ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಕಿರಣ್ ಮಾತನಾಡಿ, ಆಧುನಿಕ ಜೀವನ, ಬದಲಾದ ಆಹಾರ ಪದ್ಧತಿಯಿಂದಾಗಿ ಯುವಜನರು ಹೃದಯಾಘಾತ ಹಾಗೂ ಪಾರ್ಶ್ವವಾಯುವಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜಮೀರ್ ಮಾತನಾಡಿ, ಜನರು ರಕ್ತದಾನ ಮಾಡಲು ಮುಂದಾಗಬೇಕು. ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಹಲವು ಜನ ಜೀವ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು. ಅಪಘಾತ ಅಥವಾ ಶಸ್ತç ಚಿಕಿತ್ಸೆ ಸಂದರ್ಭ ಆಸ್ಪತ್ರೆಗಳಲ್ಲಿ ರಕ್ತ ದಾಸ್ತಾನು ಇರಬೇಕಾಗುತ್ತದೆ. ಆದ್ದರಿಂದ ಆರೋಗ್ಯವಂತ ಜನರು ಮತ್ತೊಂದು ಜೀವ ಉಳಿಸಲು ರಕ್ತ ನೀಡುವುದರಿಂದ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ್ ಮಾಳ ವಹಿಸಿದ್ದರು. ಅಬಕಾರಿ ಇಲಾಖೆ ನಿರೀಕ್ಷಕ ಲೋಕೇಶ್ ಸುವರ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಡಾ. ಕರುಂಬಯ್ಯ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಜಾಸಿಂಖಾನ್, ವಿದ್ಯಾ ನರ್ಸಿಂಗ್ ಶಾಲೆಯ ಮುಖ್ಯಸ್ಥರಾದ ಸುಲೇಮಾನ್ ಹಾಗೂ ಆಲಿಮಾ, ತಥಾಸ್ತು ಸಂಸ್ಥೆಯ ಶಿವಕುಮಾರ್, ರಮೇಶ್, ಜನಾರ್ಧನ, ರಮೇಶ್ ಮರಗೋಡು ಇದ್ದರು.