ವೀರಾಜಪೇಟೆ, ಆ. ೧೯: ದೇಶ ಪ್ರೇಮ ಇರುವಂತಹ ಪುಣ್ಯಭೂಮಿ ಕೊಡಗು. ಎಲ್ಲರೂ ಸ್ನೇಹದಿಂದ ಬದುಕುತ್ತಿರುವ ನಾಡಾಗಿದೆ ಎಂದು ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮಿ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಪರಮಪೂಜ್ಯ ಲಿಂಗೈಕ್ಯ ಶ್ರೀ ಶಾಂತಮಲ್ಲಸ್ವಾಮಿಗಳ ೨೯ನೇ ಗುರುಸ್ಮರಣೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ೧೭ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡುವಂತಾಗಬೇಕು ಎಂದರು.
ಅರಮೇರಿ ಕಳಂಚೇರಿ ಮಠದ ಫೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಶ್ರೀ ಶಾಂತಮಲ್ಲಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಕೊಡವ ಸಾಹಿತ್ಯ ಅಕಾಡೆಮಿಯ ೧೭ನೇ ಕೊಡವ ಪುಸ್ತಕ ಪತ್ತಾಯ ಲೋಕರ್ಪಣೆಗೊಳಿಸಿ ಮಾತನಾಡಿ, ಹಿರಿಯರನ್ನು ನೆನಪು ಮಾಡಿಕೊಳ್ಳುವ ಮೂಲಕ ಗುರು ಸ್ಮರಣೆ ಸದಾ ಇರುವಂತಾಗಬೇಕು. ನಾವುಗಳು ಸದಾ ಕಾಲ ಒಳಿತನ್ನೆ ಬಯಸುವಂತಾಗಬೇಕು ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ, ಪ್ರತಿಯೊಬ್ಬರೂ ಪುಸ್ತಕವನ್ನು ಪಡೆದು ಓದುವಂತಾಗಬೇಕು. ಕೊಡವ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದರು.
ಪ್ರತಿಭಾ ಪುರಸ್ಕಾರ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಂ.ಸಿ. ಶಿವಾನಿ, ಕಟ್ಟೆರ ತನಿಷ್ ಪೂಣಚ್ಚ, ಪುನಶ್ಚಿತ, ದೇಷ್ಣ ದೇಚಮ್ಮ, ಕೆ.ಎಸ್. ನಿರನ್ ಉತ್ತಮ್ಮ, ಪಿ.ಆರ್. ಫಾತಿಮ ತಸ್ಲೀಮ ಹಾಗೂ ಎಸ್.ಎಂ.ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾಥಿ ನಾಳಿಯಂಡ ಕಾವೇರಮ್ಮ, ಎನ್.ಆರ್. ರಿಮ್ಷಾನ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಎಸ್.ಎಂ.ಎಸ್. ಆಡಳಿಯ ಮಂಡಳಿಯ ನಿರ್ದೇಶಕ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮನೆಹಳ್ಳಿ ಮಠದ ಮಹಂತ ಶಿವಲಿಂಗ ಸ್ವಾಮಿ, ಮುದ್ಧಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಚಾರ್ಯ ಸ್ವಾಮಿ, ಮಳ್ಲೂರು ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿ, ಬೇಲೂರು ಇಂಟಿ ತೊಳಲು ಓಂಕಾರ ಪಟೇಲ್ ಹಿತವಚನ ನೀಡಿದರು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿಯ ಅನುರಾಧ ಚಂದ್ರಶೇಖರ್, ಪೊನ್ನಂಪೇಟೆ-ವೀರಾಜಪೇಟೆ ತಾಲೂಕು ಅಧ್ಯಕ್ಷ ಎನ್.ಎಂ. ರಾಜೇಶ್, ಮಹದೇವಪ್ಪ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಪಿ. ಗಣೇಶ್, ಪಾನಿಕುಟ್ಟಿರ ಕುಟ್ಟಪ್ಪ, ಕಂಬೇಯAಡ ಬೀನಾ, ಪೊನ್ನೀರ ಗಗನ್, ಕುಡಿಯರ ಕಾವೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್. ಸೀಮಾ ನಾಯರ್ ಸ್ವಾಗತಿಸಿದರು, ಪಿ.ಎ. ಪ್ರತಿಮ ನಿರೂಪಿಸಿ ದಾಕ್ಷಾಯಿಣಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದುಡಿಕೊಟ್ಟ್ ಪಾಟ್ ಪ್ರದರ್ಶನ ನಡೆಯಿತು.